ಲಂಡನ್ (ಪಿಟಿಐ): ಗಂಗಾ ನದಿಯು ಪ್ರಾಣಕ್ಕೆ ಕುತ್ತು ತರುವಂತಹ ರೋಗಾಣುಗಳ ಆವಾಸ ಸ್ಥಾನ ಎಂದು ಭಾರತ ಮೂಲದ ತಜ್ಞರನ್ನೊಳಗೊಂಡ ಅಧ್ಯಯನಕಾರರ ತಂಡಹೇಳಿದೆ.
ವಾರ್ಷಿಕ ತೀರ್ಥಯಾತ್ರೆಯ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಕೀಟಾಣುಗಳ ಪ್ರಮಾಣ 60 ಪಟ್ಟು ಹೆಚ್ಚಿರುತ್ತದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.
ಬ್ರಿಟನ್ನಿನ ನ್ಯೂಕ್ಯಾಸಲ್ ವಿಶ್ವವಿದ್ಯಾಲಯ ಮತ್ತು ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ–ದೆಹಲಿ) ತಜ್ಞರು ನಡೆಸಿರುವ ಅಧ್ಯಯನದಿಂದ ಈ ಸಂಗತಿ ತಿಳಿದು ಬಂದಿದೆ.
ಅಧ್ಯಯನಕ್ಕಾಗಿ ತಜ್ಞರ ತಂಡವು ಹಿಮಾಲಯದ ತಳ ಭಾಗ ಸೇರಿದಂತೆ ಗಂಗಾ ಮೇಲ್ದಂಡೆಯ ಏಳು ಸ್ಥಳಗಳಿಂದ ನೀರಿನ ಮಾದರಿ ಹಾಗೂ ಕೆಸರು ಮಣ್ಣನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು.
ಪವಿತ್ರ ತೀರ್ಥಕ್ಷೇತ್ರಗಳಾದ ಹೃಷಿಕೇಶ ಮತ್ತು ಹರಿದ್ವಾರಕ್ಕೆ ಲಕ್ಷಾಂತರ ಭಕ್ತರು ವಾರ್ಷಿಕ ಯಾತ್ರೆ ಕೈಗೊಳ್ಳುವ ಸಮಯವಾದ ಮೇ ಮತ್ತು ಜೂನ್ ತಿಂಗಳಲ್ಲಿ ಗಂಗಾ ನದಿಯಲ್ಲಿ ರೋಗಕಾರಕ ಸೂಕ್ಷ್ಮಾಣುಗಳ ಉತ್ಪತ್ತಿಗೆ ಕಾರಣವಾಗುವ ‘ಪ್ರತಿರೋಧ ವಂಶವಾಹಿ’ಯ (ಜೀನು) ಪ್ರಮಾಣ ಇತರ ಅವಧಿಗಿಂತ 60 ಪಟ್ಟು ಹೆಚ್ಚಿರುತ್ತದೆ ಎಂಬುದನ್ನು ಅಧ್ಯಯನಕಾರರು ಕಂಡು ಕೊಂಡಿದ್ದಾರೆ.
ಪ್ರಮುಖ ಯಾತ್ರಾಸ್ಥಳಗಳಲ್ಲಿ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಪ್ರಾಣಕ್ಕೆ ಎರವಾಗುವ ರೋಗಾಣುಗಳು ಶೀಘ್ರವಾಗಿ ಹರಡುವುದನ್ನು ತಡೆಯಬಹುದು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.