ADVERTISEMENT

ಗಡಾಫಿ ಪುತ್ರ ಖಾಮಿಸ್ ಸಾವು.

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST
ಗಡಾಫಿ ಪುತ್ರ ಖಾಮಿಸ್ ಸಾವು.
ಗಡಾಫಿ ಪುತ್ರ ಖಾಮಿಸ್ ಸಾವು.   

 ಟ್ರಿಪೋಲಿ/ಕೈರೊ/ ವಾಷಿಂಗ್ಟನ್ (ಡಿಪಿಎ, ಎಎಫ್‌ಪಿ, ಪಿಟಿಐ): ಅಮೆರಿಕ ನೇತೃತ್ವದ ಮಿತ್ರಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಲಿಬಿಯಾ ಅಧ್ಯಕ್ಷ ಮೊಹ್ಮದ್ ಗಡಾಫಿ ನಿವಾಸದ ಆವರಣ ಗೋಡೆ ಕುಸಿದು ಧ್ವಂಸಗೊಂಡಿದೆ. ಈ ನಡುವೆ ಸರ್ವಾಧಿಕಾರಿ ವಿರುದ್ಧ ತಿರುಗಿ ಬಿದ್ದಿರುವ ಪ್ರತಿಭಟನಾಕಾರರ ಪ್ರಾಬಲ್ಯ ಇರುವ ಬೆಂಘಝಿಯತ್ತ ತಮಗೆ ನಿಷ್ಠರಾಗಿರುವ ನಾಗರಿಕರು ಶಾಂತಿಯುತ ರ್ಯಾಲಿ ನಡೆಸುವಂತೆ ಗಡಾಫಿ ಕರೆ ನೀಡಿದ್ದಾರೆ.

ಬೆಂಘಾಝಿಯತ್ತ ನಾಗರಿಕರು ‘ಗ್ರೀನ್ ರ್ಯಾಲಿ’ ನಡೆಸಲು ಅಗತ್ಯ ಇರುವ ಸಿದ್ಧತೆ ಕೈಗೊಳ್ಳುವಂತೆ ಗಡಾಫಿ ಸಮಿತಿಯೊಂದಕ್ಕೆ ಸೂಚನೆ ನೀಡಿದ್ದಾರೆ. ಲಿಬಿಯಾ ಜನರಲ್ಲಿ ಐಕ್ಯತೆ ಮೂಡಿಸುವುದು ಇದರ ಉದ್ದೇಶ. ದೇಶದ ಎರಡನೇ ಅತಿದೊಡ್ಡ ನಗರವಾದ ಬೆಂಘಾಝಿ ಈಗ ಗಡಾಫಿ ವಿರೋಧಿಗಳ ಹಿಡಿತದಲ್ಲಿದೆ.

ಈ ನಡುವೆ ಫ್ರಾನ್ಸ್, ಅಮೆರಿಕ ಯುದ್ಧ ವಿಮಾನಗಳು ಮತ್ತು ಬ್ರಿಟನ್‌ನ ವಾಯುದಳದವರು ಕ್ಷಿಪಣಿ ಮೂಲಕ ಲಿಬಿಯಾ ಸೇನೆಯ ಅನೇಕ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿವೆ ಎಂದು ಅಲ್ ಜಝೀರಾ ವಾಹಿನಿ ತಿಳಿಸಿದೆ. ಅಲ್ಲದೆ ಸ್ಪೇನ್, ಬೆಲ್ಜಿಯಂ, ಇಟಲಿ ಮತ್ತು ಕೆನಡಾಗಳೂ ಸಹ ತಮ್ಮ  ಸೇನಾ ಪಡೆಯನ್ನು ಮಿತ್ರಪಡೆ ಜತೆಗೆ ನಿಯೋಜನೆ ಮಾಡಿವೆ.

ಗಡಾಫಿ ಸೇನೆಯ ಕೇಂದ್ರಪಡೆ ಮೇಲೆ ದಾಳಿ:  ಅಮೆರಿಕ ನೇತೃತ್ವದಲ್ಲಿ ಮಿತ್ರ ಪಡೆಗಳು ಟ್ರಿಪೋಲಿಯಲ್ಲಿ ನಡೆಸುತ್ತಿರುವ ದಾಳಿ ನಿರ್ಣಾಯಕ ಘಟ್ಟ ತಲುಪಿದೆ. ಮಿತ್ರಪಡೆಗಳು ಗಡಾಫಿ ಸೇನೆಯ ಕೇಂದ್ರ ಪಡೆಗಳ ಮೇಲೆ ಭಾನುವಾರ ರಾತ್ರಿ ಕ್ಷಿಪಣಿ ದಾಳಿ ನಡೆಸಿವೆ.

ADVERTISEMENT

ಆದರೆ ಗಡಾಫಿ ಅವರನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಟ್ರಿಪೋಲಿ ಮೇಲೆ ‘ವೈಮಾನಿಕ ನಿಷೇಧ ಪ್ರದೇಶ’ವನ್ನು ಅನುಷ್ಠಾನಗೊಳಿಸುವುದು ದಾಳಿಯ ಉದ್ದೇಶವಾಗಿತ್ತು.ಗಡಾಫಿ ಪುತ್ರನ ಸಾವು: ಲಿಬಿಯಾದ ವಾಯುದಳದ ಪೈಲಟ್ ಒಬ್ಬರು ಶನಿವಾರ ಉದ್ದೇಶಪೂರ್ವಕವಾಗಿ ತನ್ನ ಜೆಟ್ ವಿಮಾನವನ್ನು ‘ಬಾಬ್- ಅಲ್- ಅಜೀಜಿಯಾ’ ಕಟ್ಟಡದ ಆವರಣ ಗೋಡೆಗೆ ಅಪ್ಪಳಿಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಗಡಾಫಿ ಪುತ್ರ ಖಾಮಿಸ್ ಗಡಾಫಿ ಆಸ್ಪತ್ರೆಯಲ್ಲಿ ಸತ್ತಿರುವುದಾಗಿ ವಿರೋಧಿಗಳು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

ನಾಗರಿಕರ ರಕ್ಷಣೆಗೆ ಆದ್ಯತೆ:  ಬ್ರಿಟನ್‌ನ ಜೆಟ್ ವಿಮಾನಗಳು ಟ್ರಿಪೋಲಿ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಲಿಲ್ಲ. ಅಲ್ಲಿನ ಅಮಾಯಕ ನಾಗರಿಕರು ದಾಳಿಗೆ ಬಲಿಯಾಗಬಹುದು ಎನ್ನುವ ಕಾಳಜಿ ಹಿನ್ನೆಲೆಯಲ್ಲಿ ದಾಳಿ ಸ್ಥಗಿತಗೊಳಿಸಿದ್ದಾಗಿ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ದಾಳಿ ನೇತೃತ್ವ ಫ್ರಾನ್ಸ್ ಅಥವಾ ಬ್ರಿಟನ್‌ಗೆ:  ಅಮೆರಿಕ ನೇತೃತ್ವದಲ್ಲಿ ಆರಂಭವಾಗಿರುವ ‘ಆಪರೇಷನ್ ಒಡೆಸ್ಸಿ ಡಾನ್’ ನೇತೃತ್ವವನ್ನು ಫ್ರಾನ್ಸ್, ಬ್ರಿಟನ್ ಅಥವಾ ನ್ಯಾಟೊಗೆ ಬಿಟ್ಟುಕೊಡಲು ಅಮೆರಿಕ ಚಿಂತನೆ ನಡೆಸಿರುವುದಾಗಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ತಿಳಿಸಿದ್ದಾರೆ.

ಇಬ್ಬರು ಪತ್ರಕರ್ತರು ನಾಪತ್ತೆ: ಪ್ರತಿಭಟನೆ ಹತ್ತಿಕ್ಕಲು ಗಡಾಫಿ ನಡೆಸುತ್ತಿರುವ ದಾಳಿ ಮತ್ತು ಲಿಬಿಯಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಮಿತ್ರಪಡೆಗಳು ನಡೆಸುತ್ತಿರುವ ಪ್ರತಿ ದಾಳಿಯ ನಡುವೆ ಎಎಫ್‌ಪಿ ಸುದ್ದಿ ಸಂಸ್ಥೆಯ ಇಬ್ಬರು ಪತ್ರಕರ್ತರು ಶುಕ್ರವಾರದಿಂದ ನಾಪತ್ತೆಯಾಗಿದ್ದಾರೆ.

ದಾಳಿಯ ಸಂದರ್ಭದಲ್ಲಿ ಹತರಾಗಿದ್ದಾರೋ, ಇಲ್ಲವೇ ಲಿಬಿಯಾ ಸರ್ಕಾರ ಅವರನ್ನು ಬಂಧಿಸಿದೆಯೋ ತಿಳಿದು ಬಂದಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.ಜೋರ್ಡಾನ್ ಸಂಪರ್ಕಿಸಿದ ಒಬಾಮ: ಲಿಬಿಯಾ ಮತ್ತು ಬಹರೇನ್‌ನಲ್ಲಿ ನಿರಂಕುಶ ಪ್ರಭುತ್ವದ ವಿರುದ್ಧ ನಡೆಯುತ್ತಿರುವ ದಂಗೆಯನ್ನು ಗಮನದಲ್ಲಿ ಇಟ್ಟುಕೊಂಡು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಜೋರ್ಡಾನ್‌ನ ದೊರೆ ಅಬ್ದುಲ್ಲಾ-2 ಅವರನ್ನು ಭಾನುವಾರ ಸಂಪರ್ಕಿಸಿ ಚರ್ಚೆ ನಡೆಸಿದರು.

ಹಿಂಸೆ ಕೊನೆಗೊಳಿಸಲು ಒತ್ತಾಯ: ಲಿಬಿಯಾ ನಾಗರಿಕರ ಮೇಲೆ ನಡೆಯುತ್ತಿರುವ ಹಿಂಸೆಯನ್ನು ತಕ್ಷಣ ಕೊನೆಗೊಳಿಸಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ. ಮೂನ್ ಅವರು ಲಿಬಿಯಾ ಮುಖಂಡರ ಮೇಲೆ ಒತ್ತಾಯ ಮಾಡಿದ್ದಾರೆ.
ಅಲ್ಲದೇ ಲಿಬಿಯಾದಲ್ಲಿನಲ್ಲಿನ ಪರಿಸ್ಥಿತಿಯನ್ನು ಅರಿತುಕೊಂಡು ಇಡೀ ವಿಶ್ವವೇ ಅಲ್ಲಿನ ನಾಗರಿಕರ ಪರವಾಗಿ ನಿಲ್ಲಬೇಕೆಂದು ಅವರು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.