ADVERTISEMENT

ಗಢಾಫಿ ಕೈಯಿಂದ ಜಾರುತ್ತಿರುವ ಲಿಬಿಯಾ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 15:20 IST
Last Updated 24 ಫೆಬ್ರುವರಿ 2011, 15:20 IST
ಗಢಾಫಿ ಕೈಯಿಂದ ಜಾರುತ್ತಿರುವ ಲಿಬಿಯಾ
ಗಢಾಫಿ ಕೈಯಿಂದ ಜಾರುತ್ತಿರುವ ಲಿಬಿಯಾ   

 ಕೈರೊ (ಪಿಟಿಐ): ಲಿಬಿಯಾದಲ್ಲಿ ತಮ್ಮ ವಿರುದ್ಧದ ಕ್ರೂರ ದಾಳಿಗಳ ನಡುವೆಯೂ ರಾಷ್ಟ್ರದ ಹಲವು ಪೂರ್ವ ಭಾಗದ ನಗರಗಳ ಮೇಲೆ ಚಳವಳಿಕಾರರು ನಿಯಂತ್ರಣ ಸಾಧಿಸಿದ್ದರೆ ಸರ್ವಾಧಿಕಾರಿ ಮುಅಮ್ಮರ್ ಗಢಾಫಿ ಅವುಗಳ ಮೇಲಿನ ಹತೋಟಿ ಕಳೆದುಕೊಳ್ಳುತ್ತಿದ್ದಾರೆ. ಇದೇ ವೇಳೆ ಲಿಬಿಯಾ ವಿರುದ್ಧ ವಿವಿಧ ರೀತಿಯ ದಿಗ್ಬಂಧನಗಳನ್ನು ಹೇರಬೇಕೆಂದು ಜಾಗತಿಕ ಸಮುದಾಯ ತೀವ್ರವಾಗಿ ಒತ್ತಾಯಿಸಿದೆ.

ಪೂರ್ವಭಾಗದಲ್ಲಿ ಗಢಾಫಿ ಅವರಿಂದ ನಿಯೋಜನೆಗೊಂಡಿದ್ದ ಸೇನಾ ಪಡೆಗಳ ಬಹುಭಾಗ ಇದೀಗ ಜನ ಹೋರಾಟದ ಪರ ನಿಂತಿದೆ. ಹೀಗಾಗಿ ಇಲ್ಲಿನ ಟೊಬ್ರಕ್, ಬೆಂಘಝಿ ಮತ್ತಿತರ ನಗರಗಳಲ್ಲಿ ಜನತೆ ಈಗಾಗಲೇ ಗಢಾಫಿ ಆಡಳಿತದಿಂದ ಮುಕ್ತಗೊಂಡವರಂತೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಜನತೆ ಧ್ವಜಗಳನ್ನು ಹಿಡಿದು, ಪಟಾಕಿಗಳನ್ನು ಸಿಡಿಸಿ, ಕುಣಿದು ಕುಪ್ಪಳಿಸುತ್ತಿದ್ದಾರೆ ಎನ್ನಲಾಗಿದೆ.

ಪೂರ್ವಭಾಗದ ಬೆಂಘಝಿಯಲ್ಲಿ ಆರಂಭವಾದ ದಂಗೆಯು ಇದೀಗ ಎಲ್ಲ ಪ್ರಮುಖ ನಗರಗಳಿಗೂ ವಿಸ್ತರಣೆಯಾಗಿದೆ. ಸರ್ಕಾರವು ಸಂಪರ್ಕ ಹಾಗೂ ಸಂವಹನ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿ ನಾಗರಿಕರ ಮೇಲೆ ಕ್ರೂರ ದಾಳಿ ನಡೆಸುತ್ತಿದ್ದರೂ ಜನಾಂದೋಲನ ವಿಸ್ತರಣೆಯಾಗುತ್ತಿದೆ.

ADVERTISEMENT

ಆದರೆ ರಾಜಧಾನಿ ಟ್ರಿಪೊಲಿಯಲ್ಲಿ ಪ್ರತಿಭಟನಾಕಾರರ ಮೇಲೆ ಸರ್ಕಾರಿ ಪಡೆಗಳ ಕ್ರೂರ ದಾಳಿ ಮುಂದುವರಿದಿದೆ. ಪ್ರತಿಭಟನಾಕಾರರನ್ನು ಕೊಲ್ಲುವ ಗುರಿಯಿಟ್ಟು ಸೈನಿಕರು ಈ ನಗರದಲ್ಲಿ ಅತ್ತಿಂದಿತ್ತ ಗಸ್ತು ತಿರುಗುತ್ತಿದ್ದಾರೆ. ಸರ್ಕಾರಿ ನಿಯೋಜಿತ ಪಡೆಗಳು ಕಂಡಲ್ಲಿ ಗುಂಡಿಕ್ಕಲು ಕಾದು ನಿಂತಿರುವುದರಿಂದ ನಾಗರಿಕರು ಹೊರಗೆ ಬರಲು ಭೀತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ, ರಾಷ್ಟ್ರದ ಪರಿಸ್ಥಿತಿ ತೀರಾ ಹದಗೆಟ್ಟಿರುವುದರಿಂದ ಸಾವಿರಾರು ವಿದೇಶೀಯರು ರಾಷ್ಟ್ರದಿಂದ ನಿರ್ಗಮಿಸಲು ಹಾತೊರೆಯುತ್ತಿದ್ದಾರೆ. ರಷ್ಯಾ, ಫ್ರಾನ್ಸ್ ಮತ್ತು ಬ್ರಿಟನ್‌ಗಳು ತಮ್ಮ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿದ್ದರೆ ಭಾರತ ಹಾಗೂ ಚೀನಾ ತಮ್ಮ ಸಾವಿರಾರು ನಾಗರಿಕರನ್ನು ಕರೆತರುವ ಬಗ್ಗೆ ತೀವ್ರ ಪರಿಶೀಲನೆ ನಡೆಸಿವೆ. ಯೂರೋಪ್ ಒಕ್ಕೂಟ, ದಕ್ಷಿಣ ಕೊರಿಯಾ ಮತ್ತು ಅಮೆರಿಕ ಕೂಡ ತಮ್ಮ ನಾಗರಿಕರನ್ನು ಸ್ಥಳಾಂತರಿಸಲು ಕ್ರಮ ಕೈಗೊಂಡಿವೆ.

ಒಳಾಡಳಿತ ಸಚಿವರು ಹಾಗೂ ಗಢಾಫಿ ಪುತ್ರನ ಹಿರಿಯ ಸಹಾಯಕರೊಬ್ಬರು ಚಳವಳಿಕಾರರೊಂದಿಗೆ ಕೈಜೋಡಿಸಿರುವುದು ಗಢಾಫಿ ಅವರು ಆಡಳಿತದ ಮೇಲೆ ಹತೋಟಿ ಕಳೆದುಕೊಳ್ಳುತ್ತಿರುವುದನ್ನು ನಿಚ್ಚಳವಾಗಿ ತೋರಿಸಿದೆ. ಇದಕ್ಕೆ ಮುನ್ನ ಕಾನೂನು ಸಚಿವ ಮುಸ್ತಾಫ ಅಬ್ದೆಲ್‌ಜಲೀಲ್ ಕೂಡ ಹಿಂಸೆಯನ್ನು ಖಂಡಿಸಿ ರಾಜೀನಾಮೆ ನೀಡಿದ್ದರು.
ಇದೇ ವೇಳೆ ನಾಗರಿಕರ ಮೇಲಿನ ದಾಳಿಯನ್ನು ಖಂಡಿಸಿರುವ ಪೆರು, ಲಿಬಿಯಾದೊಂದಿಗೆ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಸೌಹಾರ್ದ ರಾಯಭಾರಿಯಾಗಿದ್ದ ಗಢಾಫಿ ಪುತ್ರಿ ಆಯಿಷಾ ಅಲ್ ಗಢಾಫಿ ಅವರನ್ನು ಆ ಸ್ಥಾನದಿಂದ ಕೈಬಿಡಲಾಗಿದೆ.

ಟೊಬ್ರಕ್ ನಗರದಲ್ಲಿ ಮೇಜರ್ ಜನರಲ್ ಸುಲೇಮಾನ್ ಮಹಮ್ಮೂದ್ ಮಾತನಾಡಿ, ‘ನಾವು ಜನತೆಯ ಪರವಾಗಿಯೇ ಇರುತ್ತೇವೆ. ನಾನು ಈ ಮುಂಚೆ ಗಢಾಫಿ ಅವರೊಂದಿಗೆ ಇದ್ದೆ. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ’ ಎಂದಿರುವ ಅವರು, ಗಢಾಫಿ ಅವರನ್ನು ಒಬ್ಬ ನಿರಂಕುಶವಾದಿ ಎಂದು ಟೀಕಿಸಿದ್ದಾರೆ.

ಈ ಮಧ್ಯೆ ಜನರ ಮೇಲೆ ಹಿಂಸಾತ್ಮಕ ದಾಳಿಗಳು ನಡೆದಿದ್ದನ್ನು ವಿರೋಧಿಸಿ ಬುಧವಾರ ರಾಜೀನಾಮೆ ನೀಡಿದ ಒಳಾಡಳಿತ ಸಚಿವ ಅಬ್ದೆಲ್ ಫತ್ಹಾ ಯೂನಿಸ್ ಅಲ್ ಅಬಿದಿ ಅವರನ್ನು  ಅಪಹರಿಸಲಾಗಿದೆ ಎಂದು ಬಿಬಿಸಿ ಪ್ರಸಾರ ಮಾಡಿದೆ.

ದಿಗ್ಬಂಧನ ಹೇರಿಕೆ: ಗಢಾಫಿ ಅವರಿಗೆ ಕಠಿಣ ಎಚ್ಚರಿಕೆ ರವಾನಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ,  ಲಿಬಿಯಾದ ಮೇಲೆ ಕಠಿಣವಾದ ಏಕಪಕ್ಷೀಯ ಹಾಗೂ ಬಹುಪಕ್ಷೀಯ ದಿಗ್ಬಂಧನಗಳನ್ನು ಹೇರುವ ಚಿಂತನೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಿಕ್ಕಟ್ಟಿಗೆ ಸ್ಪಂದಿಸಲು ತಮ್ಮ ಆಡಳಿತ, ತೆರೆದ ಮನಸ್ಸಿನಿಂದ ಎಲ್ಲ ಸಾಧ್ಯತೆಗಳ ಬಗ್ಗೆ ಅವಲೋಕನ ನಡೆಸುತ್ತಿದೆ ಎಂದು ಒಬಾಮ ಹೇಳಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸೋಮವಾರ ಜಿನೀವಾಗೆ ತೆರಳಲಿದ್ದಾರೆ. ಅಲ್ಲಿ ನಡೆಯಲಿರುವ ಮಾನವ ಹಕ್ಕುಗಳ ಮಂಡಲಿಯ ಸಮಾವೇಶದಲ್ಲಿ ವಿವಿಧ ರಾಷ್ಟ್ರಗಳ ವಿದೇಶಾಂಗ ಸಚಿವರು ಪಾಲ್ಗೊಳ್ಳುತ್ತಿದ್ದು, ಈ ವೇದಿಕೆಯಲ್ಲಿ ಲಿಬಿಯಾ ಬಿಕ್ಕಟ್ಟಿನ ಬಗ್ಗೆಯೂ ಚರ್ಚೆಯಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.