ADVERTISEMENT

ಗರ್ಭತಡೆ ಗುಳಿಗೆ ಮುಕ್ತ ಮಾರಾಟಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಅನಪೇಕ್ಷಿತ ಗರ್ಭಧಾರಣೆ ತಡೆಯಲು ಬಳಸುವ  `ಪ್ಲಾನ್ ಬಿ ಒನ್ ಸ್ಟೆಪ್' (ಮಾರ್ನಿಂಗ್-ಆಫ್ಟರ್ ಪಿಲ್) ಗುಳಿಗೆಯ ಮುಕ್ತ ಮಾರಾಟಕ್ಕೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಅನುಮತಿ ನೀಡಿದೆ.

ಇದುವರೆಗೆ 17 ವರ್ಷ ಮೇಲ್ಪಟ್ಟ ಯುವತಿಯರಿಗೆ ಮಾತ್ರ ವೈದ್ಯರ ಚೀಟಿ ಇಲ್ಲದೆಯೂ ಈ ಗುಳಿಗೆಯನ್ನು ನೀಡಲು ಅವಕಾಶವಿತ್ತು. 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಯುವತಿಯರು ಇದನ್ನು ಕೊಳ್ಳಬೇಕಾದರೆ ವೈದ್ಯರ ಚೀಟಿ ಕಡ್ಡಾಯವಾಗಿತ್ತು. ಆದರೆ ಇನ್ನು ಮುಂದೆ ಈ ನಿರ್ಬಂಧ ಇರುವುದಿಲ್ಲ. ಗರ್ಭಧರಿಸಲು ಸಮರ್ಥರಿರುವ ಎಲ್ಲಾ ವಯೋಮಾನದ ಬಾಲಕಿಯರು/ ಹದಿ ಯುವತಿಯರು/ ಮಹಿಳೆಯರು ಇದನ್ನು ವೈದ್ಯರ ಚೀಟಿ ಇಲ್ಲದೆಯೇ ಕೊಂಡು ಬಳಸಬಹುದು.

ಗಂಡು- ಹೆಣ್ಣು ಯಾವುದೇ ಗರ್ಭ ನಿರೋಧಕ ಮಾರ್ಗೋಪಾಯ ಬಳಸದೇ  ಲೈಂಗಿಕ ಸಂಪರ್ಕ ನಡೆಸಿದ ಮೂರು ದಿನಗಳೊಳಗೆ ಈ ಗುಳಿಗೆ ಬಳಸಬೇಕು. ಹೀಗೆ ಮಾಡಿದರೆ ಗರ್ಭಧಾರಣೆ ಸಾಧ್ಯತೆ ತಗ್ಗುತ್ತದೆ ಎಂದು ಎಫ್‌ಡಿಎ ಹೇಳಿಕೆಯಲ್ಲಿ ತಿಳಿಸಿದೆ.

`ವಯಸ್ಸಿನ ಯಾವುದೇ ನಿರ್ಬಂಧವಿಲ್ಲದೆ ಈ ಗುಳಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು' ಎಂದು ನ್ಯಾಯಾಲಯವು ಏ.5ರಂದು ಎಫ್‌ಡಿಎಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಗರ್ಭ ತಡೆ ಗುಳಿಗೆಯ ಮುಕ್ತ ಮಾರಾಟ ಅನುಮತಿ ತೀರ್ಮಾನ ಹೊರಬಿದ್ದಿದೆ.

`ಇಂತಹ ಗರ್ಭ ನಿರೋಧಕ ಗುಳಿಗೆಗಳು ಅನಪೇಕ್ಷಿತ ಗರ್ಭಧಾರಣೆಯ ಪ್ರಮಾಣವನ್ನು ಮತ್ತಷ್ಟು ತಗ್ಗಿಸಬಲ್ಲವು' ಎಂದು ಎಫ್‌ಡಿಎ ಔಷಧ ಪರಿಶೀಲನಾ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಜಾನೆಟ್ ವುಡ್‌ಕಾಕ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಗುಳಿಗೆ ತೆಗೆದುಕೊಳ್ಳುವ ಕೆಲವರಿಗೆ ಓಕರಿಕೆ, ವಾಂತಿ, ಹೊಟ್ಟೆ ನೋವು, ತಲೆ ಸುತ್ತುವಿಕೆಯಂತಹ ಅಡ್ಡ ಪರಿಣಾಮಗಳು ಕಂಡುಬಂದ ನಿದರ್ಶನಗಳಿವೆ. ವೈದ್ಯರ ಚೀಟಿ ಬರೆದು ಶಿಫಾರಸು ಮಾಡುವ ಗುಳಿಗೆಗಳಲ್ಲೂ ಇದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದರಿಂದ ಪ್ಲ್ಯಾನ್- ಬಿ ಗುಳಿಗೆಯ ಅಡ್ಡ ಪರಿಣಾಮಗಳಲ್ಲಿ ವಿಶೇಷವೇನೂ ಇಲ್ಲ ಎಂದು ಎಫ್‌ಡಿಎ ಅಭಿಪ್ರಾಯಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.