ADVERTISEMENT

ಗಾಂಧಿ ಪ್ರತಿಮೆಗೆ ಹಾನಿ: ಶ್ರೀಲಂಕೆಗೆ ಭಾರತದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 9:50 IST
Last Updated 8 ಏಪ್ರಿಲ್ 2012, 9:50 IST

ಕೊಲಂಬೋ (ಪಿಟಿಐ): ಪೂರ್ವದ ಬಟ್ಟಿಕಲೋವಾ ಪಟ್ಟಣದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಜಖಂಗೈದ ಕೃತ್ಯದ ವಿಚಾರವನ್ನು ಶ್ರೀಲಂಕಾ ಜೊತೆಗೆ ಪ್ರಸ್ತಾಪಿಸಿರುವ ಭಾರತವು ಗಾಂಧಿ ಪ್ರತಿಮೆಯ ಪುನರ್ ನಿರ್ಮಾಣ ಕಾರ್ಯದಲ್ಲಿ ನೆರವು ನೀಡಲು ಮುಂದೆ ಬಂದಿದೆ.

ಮಹಾತ್ಮಾ ಗಾಂಧಿಯವರ ಪ್ರತಿಮೆ ಹಾಗೂ ಜೊತೆಗಿದ್ದ ಲಾರ್ಡ್ ಬಡೆನ್ ಪೊವೆಲ್ ಮತ್ತು ಇಬ್ಬರು ತಮಿಳು ಪಂಡಿತರ ಪ್ರತಿಮೆಗಳನ್ನು ಹಾನಿ ಗೊಳಿಸಿದ ಕೃತ್ಯ ಗುರುವಾರ ಬೆಳಕಿಗೆ ಬಂದಿತ್ತು. ತತ್ ಕ್ಷಣವೇ ಶ್ರೀಲಂಕಾ ಸರ್ಕಾರ ಈ ಕುರಿತು ತನಿಖೆಗೆ ಆದೇಶ ಹೊರಡಿಸಿತ್ತು.

ಅಪರಿಚಿತ ಗುಂಪು ನಡೆಸಿದ ಈ ಕೃತ್ಯದ ವಿರುದ್ಧ ಭಾರತೀಯ ರಾಯಭಾರ ಕಚೇರಿ ಪ್ರತಿಭಟನೆ ಸಲ್ಲಿಸಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಗಾಂಧಿ ಪ್ರತಿಮೆ ಪುನರ್ ನಿರ್ಮಾಣಕ್ಕೆ ನೆರವಾಗುವ ಕೊಡುಗೆಯನ್ನೂ ಭಾರತ ಪ್ರಕಟಿಸಿದೆ ಎಂದು ಮೂಲಗಳು ಹೇಳಿವೆ.

ಘಟನೆಯ ಉದ್ದೇಶ ಪತ್ತೆ ಹಚ್ಚಲು  ಮತ್ತು ತಪ್ಪಿತಸ್ತರನ್ನು ಬಂಧಿಸುವ ಸಲುವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಸಮಗ್ರ ತನಿಖೆ ನಡೆಸುವಂತೆ ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಅವರಿಗೆ ಆದೇಶ ನೀಡಲಾಗಿದೆ ಎಂದು ಶ್ರೀಲಂಕೆಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಸ್ಥಳೀಯರ ಪ್ರಕಾರ 1960ರಲ್ಲಿ ಈ ಗಾಂಧಿ ಮತ್ತು ಇತರ ಪ್ರತಿಮೆಗಳನ್ನು ಸ್ಥಾಪಿಸಲಾಗಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.