ADVERTISEMENT

ಗಿಲ್ಲಾರ್ಡ್ ಅಮೆರಿಕಕ್ಕೆ ತಲೆಬಾಗಿದರೇ?

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2011, 19:30 IST
Last Updated 16 ನವೆಂಬರ್ 2011, 19:30 IST
ಗಿಲ್ಲಾರ್ಡ್ ಅಮೆರಿಕಕ್ಕೆ ತಲೆಬಾಗಿದರೇ?
ಗಿಲ್ಲಾರ್ಡ್ ಅಮೆರಿಕಕ್ಕೆ ತಲೆಬಾಗಿದರೇ?   

ಮೆಲ್ಬರ್ನ್ (ಪಿಟಿಐ): ಭಾರತಕ್ಕೆ ಯುರೇನಿಯಂ ರಫ್ತು ನಿಷೇಧ ತೆರವುಗೊಳಿಸಲು ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲ್ಲಾರ್ಡ್ ಅವರು ತೆಗೆದುಕೊಂಡ ನಿರ್ಧಾರದ ಹಿಂದೆ ಅಮೆರಿಕದ ಒತ್ತಡ ಕೆಲಸ ಮಾಡಿದೆಯೇ?

ಸುದೀರ್ಘ ಕಾಲದವರೆಗೆ ರಫ್ತು ನಿಷೇಧದಿಂದ ಭಾರತ ಹಾಗೂ ಅಮೆರಿಕದ ಬಾಂಧವ್ಯಕ್ಕೆ ತೊಡಕಾಗಬಹುದು ಎಂಬುದು ಒಬಾಮ ಆಡಳಿತದ ಲೆಕ್ಕಾಚಾರ. ಹಾಗಾಗಿ ನಿಷೇಧ ತೆರವಿಗೆ ಆಸ್ಟ್ರೇಲಿಯಾದ ಮೇಲೆ ಅದು ಒತ್ತಡ ಹಾಕಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸಂಬಂಧ ಒಬಾಮ ಆಡಳಿತದೊಂದಿಗೆ ಚರ್ಚಿಸಿದ ಬಳಿಕವೇ ಗಿಲ್ಲಾರ್ಡ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಎಂದು `ದಿ ಆಸ್ಟ್ರೇಲಿಯನ್~ ಪತ್ರಿಕೆ ವರದಿ ಮಾಡಿದೆ. ಮುಂದಿನ ತಿಂಗಳು ನಡೆಯಲಿರುವ ಲೇಬರ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ನಿಷೇಧ ಕೈಬಿಡುವಂತೆ ಒತ್ತಾಯಿಸುವುದಾಗಿ ಗಿಲ್ಲಾರ್ಡ್ ಇತ್ತೀಚೆಗೆ ತಿಳಿಸ್ದ್ದಿದರು.

ಒಬಾಮ ಅವರ ಬುಧವಾರದ ಆಸ್ಟ್ರೇಲಿಯಾ ಭೇಟಿಗೆ ಮುನ್ನಾ ದಿನ ಈ ನಿರ್ಧಾರ ಪ್ರಕಟಿಸಿದ್ದರ ಹಿಂದೆ ಯಾವುದೇ ಉದ್ದೇಶವೂ ಇಲ್ಲ. ಸೂಕ್ತ ದಿನ ಎಂದು ಅನ್ನಿಸಿದ ಕಾರಣ ನಿಷೇಧ ತೆರವು ನಿರ್ಧಾರ ಪ್ರಕಟಿಸಿದ್ದಾಗಿ ಗಿಲ್ಲಾರ್ಡ್ ಹೇಳಿದ್ದಾರೆ.

ಭಾರತದ ಬಗ್ಗೆ ಹಲವಾರು ತಿಂಗಳಿನಿಂದಲೂ ಆಸ್ಟ್ರೇಲಿಯಾ ಹಾಗೂ ಅಮೆರಿಕದ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಒಬಾಮ ಆಡಳಿತವು ಭಾರತದೊಂದಿಗೆ ನಿಕಟ ಬಾಂಧವ್ಯ ಬೆಳೆಸಿಕೊಳ್ಳಲು ಉದ್ದೇಶಿಸಿದ್ದು, ಆಸ್ಟ್ರೇಲಿಯಾವು ಈ ಕಾರ್ಯತಂತ್ರದ ಪ್ರಮುಖ ಭಾಗ ಎಂದು ಪರಿಗಣಿಸಿದೆ ಎಂದೂ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಅಮೆರಿಕ ಮತ್ತು ಆಸ್ಟ್ರೇಲಿಯಾ ನಡುವಿನ ಮೈತ್ರಿಯು ಏಷ್ಯಾ- ಪೆಸಿಫಿಕ್ ಮೈತ್ರಿಯಿಂದ ಭಾರತ- ಪೆಸಿಫಿಕ್ ಮೈತ್ರಿಗೆ ರೂಪಾಂತರಗೊಂಡಿದೆ ಎಂದು ಈ ಹಿಂದೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಹೇಳಿದ್ದರು.

ಯುರೇನಿಯಂ ರಫ್ತು ಮಾಡುವ ಅತ್ಯಂತ ದೊಡ್ಡ ರಾಷ್ಟ್ರವಾಗಿರುವ ಆಸ್ಟ್ರೇಲಿಯಾಗೆ ಭಾರತ ಅತಿ ದೊಡ್ಡ ಮಾರುಕಟ್ಟೆ. ನಿಷೇಧ ತೆರವುಗೊಳಿಸಿದಲ್ಲಿ ಹೊಸ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಮತ್ತು ಮಾರುಕಟ್ಟೆ ಅವಕಾಶ ಹೆಚ್ಚಾಗಲಿದೆ ಎಂದೂ ಗಿಲ್ಲಾರ್ಡ್ ಹೇಳಿದ್ದರು.

`2050ರ ವೇಳೆಗೆ ಭಾರತವು ಪರಮಾಣು ಇಂಧನ ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ. ಅದಕ್ಕಾಗಿ  ಪರಮಾಣು ಶಕ್ತಿಯ ಉಪಯೋಗವನ್ನು ಸದ್ಯದ ಶೇ 3ರ ಪ್ರಮಾಣದಿಂದ ಶೇ 40ಕ್ಕೆ ಏರಿಸಿಕೊಳ್ಳುವ ಸಾಧ್ಯತೆ ಇದೆ. ನಿಷೇಧ ತೆರವುಗೊಳಿಸಿದಲ್ಲಿ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಆಸ್ಟ್ರೇಲಿಯಾಕ್ಕೆ ಅವಕಾಶಗಳ ಬಾಗಿಲು ತೆರೆಯಲಿದೆ~ ಎಂದೂ ಅವರು ಅಭಿಪ್ರಾಯಪಟ್ಟಿದ್ದರು.

ಒಬಾಮ ಬೆಂಬಲ: ಭಾರತಕ್ಕೆ ಯುರೇನಿಯಂ ಪೂರೈಸುವ ಆಸ್ಟ್ರೇಲಿಯಾ ನಿರ್ಧಾರದ ಹಿಂದೆ ತಮ್ಮ ಒತ್ತಡ ಇದೆ ಎಂಬ ಹೇಳಿಕೆಯನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ತಳ್ಳಿಹಾಕಿದ್ದಾರೆ.

`ಅಂತಹ ಯಾವುದೇ ಒತ್ತಡವನ್ನೂ ನಾವು ಹೇರಿಲ್ಲ. ಬಹುಶಃ ಭಾರತದಲ್ಲಿ ಅಣುಶಕ್ತಿಯ ಶಾಂತಿಯುತ ಬಳಕೆ ಆಗುತ್ತಿರುವುದು ಆಸ್ಟ್ರೇಲಿಯಾ ಈ ನಿರ್ಧಾರ ಕೈಗೊಳ್ಳಲು ಕಾರಣ ಆಗಿರಬಹುದು~ ಎಂದು ಅವರು ಕ್ಯಾನ್‌ಬೆರ‌್ರಾದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಜೊತೆಗೆ, ಭಾರತಕ್ಕೆ ಯುರೇನಿಯಂ ಪೂರೈಕೆ ಮಾಡುವ ನಿರ್ಧಾರ ಅಂತರ ರಾಷ್ಟ್ರೀಯ ಕಾನೂನಿಗೆ ಪೂರಕವಾಗಿಯೇ ಇದೆ ಎಂದು ಹೇಳುವ ಮೂಲಕ, ಆಸ್ಟ್ರೇಲಿಯಾದ ಕ್ರಮವನ್ನು ಒಬಾಮ ಬೆಂಬಲಿಸಿದ್ದಾರೆ.

ರುಡ್ ಅಸಮಾಧಾನ
ಭಾರತಕ್ಕೆ ಯುರೇನಿಯಂ ಮಾರಾಟದ ಮೇಲೆ ವಿಧಿಸಿದ್ದ ನಿಷೇಧ ತೆರವುಗೊಳಿಸುವ ಗಿಲ್ಲಾರ್ಡ್ ನಿರ್ಧಾರದಿಂದ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಕೆವಿನ್ ರುಡ್ ಅಸಮಾಧಾನಗೊಂಡಿದ್ದಾರೆ. ಈ ಕ್ರಮದಿಂದಾಗಿ ಆಡಳಿತಾರೂಢ ಲೇಬರ್ ಪಕ್ಷದಲ್ಲಿ ಒಡಕು ಮೂಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಷಯದಲ್ಲಿ ರುಡ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಗಿಲ್ಲಾರ್ಡ್ ನಿರ್ಧಾರ ಪ್ರಕಟಿಸ್ದ್ದ್ದ್ದಿದಾರೆ. ಹಾಗಾಗಿ ರುಡ್ ಅಸಮಾಧಾನಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.