ADVERTISEMENT

ಗಿಲ್‌ಗಿಟ್- ಬಾಲ್ಟಿಸ್ತಾನ ಚೀನಾ ಸುಪರ್ದಿಗೆ!

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಜೊತೆಗಿನ ಬಾಂಧವ್ಯ ಹಳಸುತ್ತಿರುವ ಹೊತ್ತಿನಲ್ಲಿಯೇ, ಇದೀಗ ಪಾಕಿಸ್ತಾನವು ಚೀನಾದೊಂದಿಗಿನ ತನ್ನ ಮೈತ್ರಿಯನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಮುಂದಾಗುತ್ತಿದೆ.

ವಿವಾದಿತ ಗಿಲ್‌ಗಿಟ್- ಬಾಲ್ಟಿಸ್ತಾನ ಪ್ರಾಂತ್ಯವನ್ನು ಮುಂದಿನ 50 ವರ್ಷಗಳವರೆಗೆ ಚೀನಾ ದೇಶಕ್ಕೆ ಗುತ್ತಿಗೆ ನೀಡಲು ಚಿಂತನೆ ನಡೆಸುವ ಮೂಲಕ,   ಉಭಯ ದೇಶಗಳ ನಡುವಿನ ವ್ಯೆಹಾತ್ಮಕ ಸಂಬಂಧಕ್ಕೆ ಭದ್ರ ಬುನಾದಿ ಹಾಕಲು ಹೊರಟಿದೆ ಎಂದು ಅಮೆರಿಕ ಮೂಲದ ಚಿಂತಕರ ಚಾವಡಿಯೊಂದು ಹೇಳಿದೆ.

ಕಳೆದ ತಿಂಗಳು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಅವರು ಚೀನಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ಸ್ಥಳೀಯ ಉರ್ದು ಪತ್ರಿಕೆ `ರೋಜ್ನಮಾ ಬಾಂಗ್- ಎ- ಶಹರ್~ನಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ಮಧ್ಯಪ್ರಾಚ್ಯ ಮಾಧ್ಯಮ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.

ಯೋಜನೆಯ ಮೊದಲ ಹಂತವಾಗಿ ಚೀನಾ, ಅಭಿವೃದ್ಧಿ ಯೋಜನೆಗಳಿಗೆ ಕಾರ್ಯತಂತ್ರ ರೂಪಿಸಲಿದೆ ಮತ್ತು ನಿಧಾನವಾಗಿ ಈ ಪ್ರಾಂತ್ಯವನ್ನು  ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ. ಮುಂದಿನ ಹಂತದಲ್ಲಿ ಅದನ್ನು ಸಂಪೂರ್ಣವಾಗಿ 50 ವರ್ಷಗಳವರೆಗೆ ತನ್ನ ಸ್ವಾಧೀನದಲ್ಲಿ ಇಟ್ಟುಕೊಳ್ಳುತ್ತದೆ ಮತ್ತು ಅಲ್ಲಿ ತನ್ನ ಸೇನೆಯನ್ನು ನಿಯೋಜಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.