ADVERTISEMENT

ಗೌರವಾನ್ವಿತ ಅಂತ್ಯಕ್ರಿಯೆ: ಅಮೆರಿಕ

​ಪ್ರಜಾವಾಣಿ ವಾರ್ತೆ
Published 3 ಮೇ 2011, 19:30 IST
Last Updated 3 ಮೇ 2011, 19:30 IST

ವಾಷಿಂಗ್ಟನ್/ ಇಸ್ಲಾಮಾಬಾದ್ (ಪಿಟಿಐ, ಐಎಎನ್‌ಎಸ್): ಒಸಾಮಾ ಬಿನ್ ಲಾಡೆನ್ ಮೃತದೇಹಕ್ಕೆ ಯಾವುದೇ ತೆರನಾದ ಅಪಚಾರವೆಸಗಿಲ್ಲ, ಇಸ್ಲಾಂ ಧಾರ್ಮಿಕ ಪದ್ಧತಿಗಳಿಗೆ ಒಂದಿನಿತೂ ಕುಂದುಂಟಾಗದ ರೀತಿಯಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

‘ಇಸ್ಲಾಂ ನಂಬಿಕೆ, ನಿಯಮಗಳ ಪ್ರಕಾರ ಯಾವುದೇ ಮೃತ ವ್ಯಕ್ತಿಯ ದೇಹಕ್ಕೆ 24 ಗಂಟೆಗಳ ಒಳಗೆ ಅಂತ್ಯ ಸಂಸ್ಕಾರ ನಡೆಸಲೇ ಬೇಕು. ಆದರೆ ನಾವು ಪಾಕ್ ನೆಲದಲ್ಲಿ ಈ ಕಾರ್ಯಾಚರಣೆ ನಡೆಸಿದ ನಂತರ ಆ ಮೃತದೇಹವನ್ನು ಯಾವ ದೇಶಕ್ಕೆ ಒಪ್ಪಿಸುವುದು ಇತ್ಯಾದಿ ಗೊಂದಲಗಳು ಸೃಷ್ಟಿಯಾಗಿ 24ಗಂಟೆಗಳು ಮೀರುವ ಸಾಧ್ಯತೆ ಇರುವುದರಿಂದ ಈ ಚುರುಕಿನ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ಜಾನ್‌ಬ್ರೆನ್ನನ್ ಹೇಳಿದ್ದಾರೆ.

ಮೃತದೇಹವನ್ನು ಶುಚಿಗೊಳಿಸಿ, ಶಾಸ್ತ್ರೋಕ್ತವಾಗಿ ಬಿಳಿಯ ಬಟ್ಟೆಯಲ್ಲಿ ಸುತ್ತಿ ‘ಕಾರ್ಲ್ ವಿನ್ಸನ್’ ಏರ್‌ಕ್ರಾಫ್ಟ್‌ನಲ್ಲಿ ಕೊಂಡೊಯ್ದು ಅರಬಿ ಕಡಲಿನ ಉತ್ತರ ಭಾಗದ ಒಂದು ಕಡೆ ಸ್ಥಳೀಯರೊಬ್ಬರಿಂದ ಅರೆಬಿಕ್‌ನಲ್ಲಿ ಪ್ರಾರ್ಥನೆಯೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಅಂದರೆ ಬಿಳಿಯ ಹಲಗೆಯ ಮೇಲೆ ಮಲಗಿಸಿ ಕಡಲಿಗೆ ಇಳಿಬಿಡಲಾಯಿತು ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಯಾವುದೇ ಭೂಪ್ರದೇಶದಲ್ಲಿ ಲಾಡೆನ್‌ನ ಅಂತ್ಯಕ್ರಿಯೆ ನಡೆಸಿದ್ದೇ ಆದರೆ ಅದು ಮುಂದೊಂದು ದಿನ ಆತನ ಅಭಿಮಾನಿಗಳಿಗೆ ಸ್ಮಾರಕ ತಾಣವಾಗಿಬಿಡುವ ಅಪಾಯವನ್ನು ಮನಗಂಡೇ ಅಮೆರಿಕ ಈ ರೀತಿ ಅಂತ್ಯಕ್ರಿಯೆ ನಡೆಸಿದೆ ಎನ್ನಲಾಗಿದೆ.

ಸಮುದ್ರ ಸಂಸ್ಕಾರಕ್ಕೆ ಖಂಡನೆ: ಜಕಾರ್ತ (ಎಎಫ್‌ಪಿ): ಲಾಡೆನ್ ಮೃತದೇಹವನ್ನು ಸಮುದ್ರದಲ್ಲಿ ಸಂಸ್ಕಾರ ಮಾಡಿರುವುದನ್ನು ಖಂಡಿಸಿರುವ ಇಂಡೋನೇಷ್ಯಾದ ಪ್ರಮುಖ ಮುಸ್ಲಿಂ ಸಂಘಟನೆಗಳು, ಆತನ ಸಾವಿಗಾಗಿ ಶೋಕ ವ್ಯಕ್ತಪಡಿಸಲು ಒಂದು ದಿನ ಸಾಮೂಹಿಕ ಪ್ರಾರ್ಥನೆ ನಡೆಸುವುದಾಗಿ ಹೇಳಿವೆ.

ಅಪರಾಧಿಯಾಗಿದ್ದರೂ ಮುಸ್ಲಿಂ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಬೇಕು. ಆತನ ದೇಹವನ್ನು ಬಿಳಿಬಟ್ಟೆಯಲ್ಲಿ ಮುಚ್ಚಿ ಪ್ರಾರ್ಥನೆಯೊಂದಿಗೆ ಭೂಮಿಯಲ್ಲಿ ಸಂಸ್ಕಾರ ಮಾಡಬೇಕೇ ಹೊರತು ಸಮುದ್ರದಲ್ಲಲ್ಲ ಎಂದು ಅಲ್ಲಿನ ಬಹು ದೊಡ್ಡ ಮುಸ್ಲಿಂ ಸಂಘಟನೆ ‘ಇಂಡೋನೇಷ್ಯಾ ಉಲೆಮಾ ಕೌನ್ಸಿಲ್’ ಮುಖ್ಯಸ್ಥ ಅಮಿದನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.