ADVERTISEMENT

ಚೀನಾದಲ್ಲಿ ಪ್ರಬಲ ಭೂಕಂಪ, 113 ಜನರ ಸಾವು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:44 IST
Last Updated 20 ಏಪ್ರಿಲ್ 2013, 10:44 IST

ಬೀಜಿಂಗ್ (ಪಿಟಿಐ): ನೈರುತ್ಯ ಚೀನಾದಲ್ಲಿ ಶನಿವಾರ 7.0 ತೀವ್ರತೆ ಪ್ರಬಲ ಭೂಕಂಪ ಸಂಭವಿಸಿದ್ದು, 113 ಮಂದಿ ಸಾವನ್ನಪ್ಪಿದ್ದು, 3 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಇಲ್ಲಿನ ಸಿಚುವಾನ್ ಪ್ರಾಂತ್ಯದಲ್ಲಿ ಸ್ಥಳಿಯ ಕಾಲಮಾನ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಂಭವಿಸಿದ ವಿನಾಶಕಾರಿ ಭೂಕಂಪವು ಅಕ್ಷರಶ: ಇಡೀ ಪ್ರಾಂತ್ಯದ ನಗರಗಳಲ್ಲಿನ ಕಟ್ಟಡಗಳನ್ನು ನಾಶಪಡಿಸಿದೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ವಿಮಾನನಿಲ್ದಾಣಗಳಿಗೂ ಹಾನಿಯಾಗಿದ್ದು ಅವನ್ನು ಮುಚ್ಚಲಾಗಿದೆ.

ಸಾವಿರಾರು ಯೋಧರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದು ಅವಶೇಷಗಳಡಿ ಬದುಕಿದ್ದವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಇಡೀ ಪ್ರಾಂತ್ಯದ ಜನರು ಭೂಕಂಪದಿಂದ ತತ್ತರಿಸಿದ್ದು ಭಯಭೀತಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ 5 ವರ್ಷಗಳಲ್ಲಿ ಈ ಭಾಗದಲ್ಲಿ ಸಂಭವಿಸುತ್ತಿರುವ 2ನೇ ಅತಿದೊಡ್ಡ ಭೂಕಂಪದ ಇದಾಗಿದೆ ಎಂದು ತಜ್ಞರು ಅಂದಾಜಿಸಿದ್ದು, ಸಾವುನೋವಿನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.