ADVERTISEMENT

ಚೀನಾ: ಗುಲಾಮರಂತೆ ಕಾರ್ಮಿಕರ ಮಾರಾಟ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೀಜಿಂಗ್ (ಪಿಟಿಐ): ಚೀನಾದ ಕೆಲವು ಉದ್ಯೋಗ ಏಜೆನ್ಸಿಗಳು ವಲಸೆ ಕಾರ್ಮಿಕರಿಗೆ ಕೆಲಸದ ಆಮಿಷ ತೋರಿಸಿ ಗುಲಾಮರಂತೆ ಮಾರಾಟ ಮಾಡುತ್ತಿದ್ದು, ಈ ಕಾರ್ಮಿಕರನ್ನು ಅತ್ಯಂತ ಕಠಿಣ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವರದಿಯೊಂದು ಬಹಿರಂಗ ಪಡಿಸಿದೆ.

ಪರವಾನಗಿ ಪಡೆಯದ ಇಂತಹ ಉದ್ಯೋಗ ಏಜೆನ್ಸಿಗಳು ಹೆನ್ನಾನ್ ಪ್ರಾಂತ್ಯದ ಝೆನ್‌ಜಾಂಗ್ ರೈಲು ನಿಲ್ದಾಣದ ಸುತ್ತ ರಹಸ್ಯವಾಗಿ ಕಾರ್ಯಾಚರಣೆ ಮಾಡುತ್ತಿದ್ದು, ವಲಸೆ ಬರುವ ಕಾರ್ಮಿಕರಿಗೆ ಕೆಲಸದ ಆಮಿಷ ತೋರಿಸಿ ನೋಂದಾಯಿಸಿಕೊಂಡು ಮಾರಾಟ ಮಾಡುತ್ತಿವೆ ಎಂದು `ಎಕನಾಮಿಕ್ ಇನ್‌ಫಾರ‌್ಮೇಷನ್ ಡೇಲಿ~ ವರದಿ ಮಾಡಿದೆ.

ಹೀಗೆ ಮಾರಾಟ ಮಾಡಲಾಗುವ ಕಾರ್ಮಿಕರನ್ನು ಗಣಿ, ಕಲ್ಲು ಕ್ವಾರಿಗಳಲ್ಲಿ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತದೆ. ಇಲ್ಲಿ ಕಾರ್ಮಿಕರಿಗೆ ಕೂಲಿಯನ್ನೇ ನೀಡದೆ ದುಡಿಸಿಕೊಳ್ಳಲಾಗುತ್ತದೆ.

28 ವರ್ಷದ ಜೆನ್ ವೇಯ್ ಎನ್ನುವ ವ್ಯಕ್ತಿ ಕಳೆದ ಏಪ್ರಿಲ್‌ನಲ್ಲಿ ಕೆಲಸ ಹುಡುಕಿಕೊಂಡು ಝೆನ್‌ಜಾಂಗ್ ಪ್ರಾಂತ್ಯಕ್ಕೆ ಆಗಮಿಸಿದ. ಆಗ ಉದ್ಯೋಗ ಏಜೆನ್ಸಿಯ ವ್ಯಕ್ತಿಯೊಬ್ಬ ತಿಂಗಳಿಗೆ 1,500 ಯೆನ್ ವೇತನದ ಕೆಲಸ ನೀಡುವುದಾಗಿ ನಂಬಿಸಿ, ಹತ್ತು ಕಾರ್ಮಿಕರು ಉಳಿದುಕೊಂಡಿದ್ದ ಕೊಠಡಿಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ. ಈ ಎಲ್ಲಾ ಕಾರ್ಮಿಕರು ಮೇಲ್ನೋಟಕ್ಕೆ ಬುದ್ಧಿಮಾಂದ್ಯರಂತೆ ಕಂಡು ಬರುತ್ತಿದ್ದರು. ಮರುದಿನ ಈ ಕಾರ್ಮಿಕರನ್ನು ವಿವಿಧ ಕಲ್ಲು ಕ್ವಾರಿಗಳಿಗೆ ಕೆಲಸಕ್ಕೆ ಕಳುಹಿಸಲಾಯಿತು.

ಕಾರ್ಮಿಕರು ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು ಕ್ವಾರಿಯ ಸುತ್ತ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಒಟ್ಟಾರೆ ಹೀಗೆ ನೇಮಕವಾದ ಕಾರ್ಮಿಕರು ಗುಲಾಮರಂತೆ ದುಡಿಯಬೇಕಾದ ಸನ್ನಿವೇಶದಲ್ಲಿ ಸಿಲುಕಿದ್ದಾರೆ ಎಂದು ಡೇಲಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.