ADVERTISEMENT

ಜಪಾನ್: ರೋಕ್ ಅಬ್ಬರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST
ಜಪಾನ್: ರೋಕ್ ಅಬ್ಬರ
ಜಪಾನ್: ರೋಕ್ ಅಬ್ಬರ   

ಟೋಕಿಯೊ (ಐಎಎನ್‌ಎಸ್/ಎಎಫ್‌ಪಿ): ಜಪಾನಿನ ಬೃಹತ್ ದ್ವೀಪ `ಹೊನ್‌ಶು~ ಮೇಲೆ ಪ್ರಬಲವಾದ `ರೋಕ್~ ಚಂಡಮಾರುತ ಬುಧವಾರ ಅಪ್ಪಳಿಸಿದ್ದು, ದೇಶದ ಪಶ್ಚಿಮ ಮತ್ತು ಕೇಂದ್ರ ಭಾಗದಲ್ಲಿ ಐವರು ಸಾವನ್ನಪ್ಪಿದ್ದಾರೆ.

ಗಿಫು ಪ್ರಾಂತ್ಯದಲ್ಲಿ ಪ್ರಾಥಮಿಕ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ಮಗುವೊಂದು ಸೇರಿದಂತೆ ಇಬ್ಬರು ಕಣ್ಮರೆಯಾಗಿದ್ದಾರೆ.

ಜಪಾನ್‌ನ ಕೇಂದ್ರ ಭಾಗದಲ್ಲಿರುವ ಹಮಾಮತ್ಸುವಿನಲ್ಲಿ ಭೂ ಕುಸಿತ ಉಂಟಾಗಿದೆ. ಗಂಟೆಗೆ 216 ಕಿ.ಮೀ. ವೇಗದಲ್ಲಿ ಚಲಿಸುತ್ತಿರುವ `ರೋಕ್~ ಚಂಡಮಾರುತವು ಈಶಾನ್ಯದ ಕಡೆಗೆ ಸಾಗುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಫುಕುಶಿಮಾ ಅಣು ಸ್ಥಾವರದತ್ತ ಚಂಡಮಾರುತ ಚಲಿಸುತ್ತಿದ್ದು ಅಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗುತ್ತಿದೆ.

ಐಚಿ, ಇಹಿಮೆ, ಸಾಗಾ ಮತ್ತು ನಾಗಸಾಕಿ ಪ್ರಾಂತ್ಯಗಳಲ್ಲೂ ಚಂಡಮಾರುತ ತನ್ನ ಪ್ರಭಾವ ಬೀರಿದೆ ಎಂದು `ಕ್ಸಿನ್‌ಹುವಾ~ ಪತ್ರಿಕೆ ವರದಿ ಮಾಡಿದೆ.

ಚಂಡಮಾರುತದ ಕಾರಣ ನಾಗೊಯಾ ಪಟ್ಟಣದ ಹತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಈ ಚಂಡಮಾರುತ ಭಾರಿ ಮಳೆ ಮತ್ತು ನೆರೆ ಹಾವಳಿ ಉಂಟಾಗುವ ಸಾಧ್ಯತೆ ಇದೆ ಎಂದು ಕೈಡೊ ವಾಹಿನಿಯಲ್ಲಿ ವರದಿ ಆಗಿದೆ.

200ಕ್ಕೂ ಹೆಚ್ಚು ಸ್ಥಳೀಯ ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದ್ದು,  ಶಿಂಜೊ ಮತ್ತು ಫುಕುಶಿಮಾ, ಟೋಕಿಯೊ ಮತ್ತು ಶಿನ್-ಒಸಾಕ ನಡುವಿನ ಬುಲೆಟ್ ರೈಲುಗಳ ಸಂಚಾರ ವನ್ನು ಸ್ಥಗಿತಗೊಳಿಸಲಾಗಿದೆ.  ಹಾಗೆಯೇ ದೋಣಿ ಮತ್ತು ಅನೇಕ ಕಡೆ ರಸ್ತೆ ಸಂಚಾರವನ್ನು ರದ್ದು ಮಾಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.