ವಾಷಿಂಗ್ಟನ್ (ಪಿಟಿಐ): ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನವು 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದ್ದು, ಈ ಕುರಿತು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಭಾರತದಂತಹ ಅಭಿವೃದ್ಧಿಶೀಲ ದೇಶಗಳು ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿಶ್ವಬ್ಯಾಂಕ್ ಎಚ್ಚರಿಕೆ ನೀಡಿದೆ.
ಅಂತರರಾಷ್ಟ್ರೀಯ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಕತಾರ್‌ನ ದೋಹಾದಲ್ಲಿ ಇದೇ 26ರಿಂದ ನಡೆಯಲಿರುವ ವಿಶ್ವದ ಎಲ್ಲಾ ರಾಷ್ಟ್ರಗಳ ಉನ್ನತ ಮಟ್ಟದ ಸಮಾಲೋಚನಾ ಸಭೆಗೆ ಮುಂಚಿತವಾಗಿಯೇ ವಿಶ್ವಬ್ಯಾಂಕ್ ಜಾಗತಿಕ ತಾಪಮಾನ ಕಡಿತಕ್ಕೆ ಎಲ್ಲಾ ರಾಷ್ಟ್ರಗಳು ಮುಂದಾಗುವಂತೆ ಸಲಹೆ ಮಾಡಿದೆ.
`ಪಾಟ್ಸ್‌ಡ್ಯಾಮ್ ಹವಾಮಾನ ವೈಪರಿತ್ಯ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ~ (ಪಾಟ್ಸ್‌ಡ್ಯಾಮ್ ಇನ್‌ಸ್ಟಿಟ್ಯೂಟ್ ಫಾರ್ ಕ್ಲೈಮೆಟ್ ಇಂಪ್ಯಾಕ್ಟ್ ರಿಸರ್ಚ್ (ಪಿಐಕೆ) ಅಂಡ್ ಕ್ಲೈಮೆಟ್ ಅನಲಿಟಿಕ್ಸ್) ಜಾಗತಿಕ ತಾಪಮಾನ ಸಂಬಂಧ ಸಿದ್ಧಪಡಿಸಿರುವ `ಟರ್ನ್ ಡೌನ್ ದ ಹೀಟ್~ (ತಾಪಮಾನ ಕಡಿತಗೊಳಿಸಿ) ಎಂಬ ವರದಿಯ ಅಂಶಗಳನ್ನು ವಿಶ್ವಬ್ಯಾಂಕ್ ಉಲ್ಲೇಖಿಸಿದೆ.
`ಹೆಚ್ಚುತ್ತಿರುವ ತಾಪಮಾನದಿಂದಾಗಿ 2100ರ ಹೊತ್ತಿಗೆ ಸಮುದ್ರಗಳ ಮಟ್ಟ 0.5 ರಿಂದ 1 ಮೀಟರ್ ಏರಿಕೆಯಾಗಲಿದೆ. ಅಲ್ಲದೆ, ಇನ್ನೂ ಅಧಿಕ ಮಟ್ಟವನ್ನು ತಲಪುವ ಸಾಧ್ಯತೆಯಿದೆ~ ಎಂದು ವರದಿ ತಿಳಿಸಿದೆ. 6 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತಲೂ ಹೆಚ್ಚಿನ ಸರಾಸರಿ ಬೇಸಿಗೆ ತಾಪಮಾನವು ಮೆಡಿಟೆರೇನಿಯನ್, ಉತ್ತರ ಆಫ್ರಿಕಾ, ಮಧ್ಯ ಪೂರ್ವ ಮತ್ತು ಅಮೆರಿಕದ ಭಾಗಗಳಲ್ಲಿ ಉಂಟಾಗಬಹುದು~ ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.
ಜಾಗತಿಕ ತಾಪಮಾನದ ಈ ಏರಿಕೆಯಿಂದಾಗಿ ಭಾರತ ಸೇರಿದಂತೆ ಮುಂದುವರೆಯುತ್ತಿರುವ ಹಲವು ರಾಷ್ಟ್ರಗಳಲ್ಲಿ ಆಹಾರ ಉತ್ಪಾದನೆಯ ಕೊರತೆ, ಅಪೌಷ್ಠಿಕತೆ, ಒಣ ಭೂಮಿಯ ಹೆಚ್ಚಳ, ಉಷ್ಣಾಂಶದಲ್ಲಿ ಹೆಚ್ಚಳ, ಚಂಡಮಾರುತ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳಿಗೆ ಎಡೆ ಮಾಡಿಕೊಡಲಿದೆ ಎಂದೂ ವರದಿಯಲ್ಲಿ ಎಚ್ಚರಿಸಲಾಗಿದೆ.
`ಜಾಗತಿಕ ತಾಪಮಾನದ 4 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಲು ಅವಕಾಶ ನೀಡದೆ, 4 ರಿಂದ 2 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿಸಲು ವಿಶ್ವದ ಎಲ್ಲಾ ರಾಷ್ಟ್ರಗಳು ಮುಂದಾಗಬೇಕು~ ಎಂದು ವಿಶ್ವಬ್ಯಾಂಕ್ ಗ್ರೂಪ್‌ನ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಎಲ್ಲಾ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.