ADVERTISEMENT

ಜಾಧವ್ ಮರಣದಂಡನೆಗೆ ಐಸಿಜೆ ತಡೆ: ಪಾಕ್‌ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ

ಏಜೆನ್ಸೀಸ್
Published 19 ಮೇ 2017, 9:40 IST
Last Updated 19 ಮೇ 2017, 9:40 IST
ಜಾಧವ್ ಮರಣದಂಡನೆಗೆ ಐಸಿಜೆ ತಡೆ: ಪಾಕ್‌ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ
ಜಾಧವ್ ಮರಣದಂಡನೆಗೆ ಐಸಿಜೆ ತಡೆ: ಪಾಕ್‌ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ   

ಇಸ್ಲಾಮಾಬಾದ್: ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಗೆ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತಡೆ ನೀಡಿರುವುದನ್ನು ‘ದೇಶದ ಗೆಲುವು’ ಎಂಬುದಾಗಿಯೇ ಭಾರತದ ಭಾರತದ ಬಹುತೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಪಾಕಿಸ್ತಾನದ ದಿನಪತ್ರಿಕೆಗಳಲ್ಲಿ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದೆ ಮತ್ತು ವಾದ ಮಂಡನೆಗೆ ಸೂಕ್ತ ಸಿದ್ಧತೆ ನಡೆಸಿಲ್ಲ ಎಂದು ಹಲವು ಪ್ರಮುಖ ದಿನಪತ್ರಿಕೆಗಳು ಆಕ್ರೋಶ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ಐಸಿಜೆಯ ಅಂತಿಮ ತೀರ್ಪಿನ ಬಗ್ಗೆ ಆಶಾವಾದ ವ್ಯಕ್ತಪಡಿಸಿವೆ. ಮಾನವಹಕ್ಕುಗಳ ನೆಲೆಯಲ್ಲಿ ಪ್ರಕರಣವನ್ನು ನೋಡಬೇಕು ಎಂಬ ವಾದವೂ ಪ್ರಕಟವಾಗಿದೆ.

ಡಾನ್ ಪತ್ರಿಕೆಯು ಜಾಧವ್ ಅವರನ್ನು ಭಾರತ ಗೂಢಚಾರ ಎಂದೇ ಪರಿಗಣಿಸಿ ವರದಿ ಮಾಡಿದೆ. ‘ಭಾರತದ ಗೂಢಚಾರ ಜಾಧವ್ ಗಲ್ಲು ಶಿಕ್ಷೆ ವಿಚಾರದಲ್ಲಿ ಹಿನ್ನಡೆ’ ಎಂದು ಅದು ಶೀರ್ಷಿಕೆ ನೀಡಿದೆ. ಮತ್ತೊಂದೆಡೆ, ‘ಭಾರತದ ಗೂಢಚಾರ ಜಾಧ‌ವ್‌ರನ್ನು ಗಲ್ಲಿಗೇರಿಸಬಾರದು ಎಂದು ಐಸಿಜೆ ಪಾಕಿಸ್ತಾನಕ್ಕೆ ಸೂಚಿಸಿದೆ’ ಎಂದು ಡೈಲಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ‘ಜಾಧವ್ ಗಲ್ಲು ಶಿಕ್ಷೆಗೆ ತಡೆ’ ಎಂದು  ‘ದಿ ನೇಷನ್’ ಪತ್ರಿಕೆ ಶೀರ್ಷಿಕೆ ನೀಡಿದೆ.

ADVERTISEMENT

ಸರ್ಕಾರದ ವಿರುದ್ಧ ಆಕ್ರೋಶ: ರಾಜಕಾರಣಿಗಳ, ವಕೀಲರ, ತಜ್ಞರ ಅಭಿಪ್ರಾಯಗಳುಳ್ಳ ವರದಿಗಳನ್ನು ಬಹುತೇಕ ಎಲ್ಲ ಪತ್ರಿಕೆಗಳೂ ಪ್ರಕಟಿಸಿದ್ದು, ಹೆಚ್ಚಿನವು‌ಗಳಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕಾಣಿಸಿವೆ.

‘ಪ್ರತಿಷ್ಠೆಯ ವಿಷಯವಾಗಿಸದಿರಿ’: ಪ್ರಕರಣವನ್ನು ಪಾಕಿಸ್ತಾನವು ಪ್ರತಿಷ್ಠೆಯ ವಿಷಯವನ್ನಾಗಿಸದೆ ಮಾನವಹಕ್ಕುಗಳ ನೆಲೆಯಲ್ಲಿ ನೋಡಬೇಕು ಎಂದು ಮಾನವಹಕ್ಕುಗಳ ಹೋರಾಟಗಾರ ಆಸ್ಮಾ ಜಹಾಂಗೀರ್ ಹೇಳಿಕೆ ಉಲ್ಲೇಖಿಸಿ ‘ಡಾನ್’ ಪತ್ರಿಕೆ ವರದಿ ಮಾಡಿದೆ.

‘ಹಾದಿ ತಪ್ಪಿಸುವುದನ್ನು ನಿಲ್ಲಿಸಿ’: ‘ರಾಷ್ಟ್ರೀಯತೆಯ ವಿಷಯಕ್ಕೆ ಸಂಬಂಧಿಸಿ ಸಾರ್ವಜನಿಕರನ್ನು ಹಾದಿತಪ್ಪಿಸುವ ಕೆಲಸವನ್ನು ಟಿವಿ ವಾಹಿನಿಗಳು ನಿಲ್ಲಿಸಬೇಕು’ ಎಂದು ಡೈಲಿ ಟೈಮ್ಸ್ ಪತ್ರಿಕೆಯ ಒಪೆಡ್ ಪುಟದ ಅಂಕಣವೊಂದರಲ್ಲಿ ಉಲ್ಲೇಖಿಸಲಾಗಿದೆ. ಇದೇ ಪುಟದ ಮತ್ತೊಂದು ಅಂಕಣದಲ್ಲಿ, ‘ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಲು ಪಾಕಿಸ್ತಾನ ಹಿಂದೇಟು ಹಾಕಿದ್ದರೂ ಹೆಚ್ಚಿನ ಪ್ರಯೋಜನವಾಗುತ್ತಿರಲಿಲ್ಲ. ದ್ವಿಪಕ್ಷೀಯ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥಪಡಿಸುವ ಬದಲು ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿರುವುದು ಭವಿಷ್ಯದಲ್ಲಿ ಪಾಕಿಸ್ತಾನಕ್ಕೂ ಸಂಕುಚಿತವಾಗಿ ಯೋಚಿಸಲು ಅನುವು ಮಾಡಿಕೊಟ್ಟಂತಾಗಿದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಷರೀಫ್‌ – ಜಿಂದಾಲ್ ನಂಟಿನ ಬಗ್ಗೆ ಪ್ರಶ್ನೆ: ಭಾರತದ ಉದ್ಯಮಿ ಸಜ್ಜನ್ ಜಿಂದಾಲ್ ಅವರು ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ರಹಸ್ಯವಾಗಿ ಭೇಟಿಯಾಗಿರುವ ಬಗ್ಗೆಯೂ ಪ್ರತಿಪಕ್ಷ ತೆಹ್ರೀಕ್ ಇ ಇನ್ಸಾಫ್ ಪ್ರಶ್ನಿಸಿದೆ. ಭೇಟಿಯ ಸಂಪೂರ್ಣ ವಿವರವನ್ನು ಬಹಿರಂಗಪಡಿಸಬೇಕು ಎಂದು ಪಕ್ಷದ ವಕ್ತಾರರು ಆಗ್ರಹಿಸಿದ್ದಾರೆ.

ಒಟ್ಟು ಪ್ರಕರಣವನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಮತ್ತೊಂದೆಡೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ ಪ್ರತಿಪಕ್ಷಗಳು ತೀರ್ಪು ನೀಡಿದಂತೆ ವರ್ತಿಸಬಾರದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಅದೇ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದ ಪ್ರಮುಖ ರಾಜಕಾರಣಿಗಳು ಮತ್ತು ತಜ್ಞರ ಟ್ವಿಟರ್ ಪ್ರತಿಕ್ರಿಯೆಗಳು ಹೀಗಿವೆ:

‘ಕುಲಭೂಷಣ್ ಜಾಧವ್ ವಿರುದ್ಧ ಪ್ರಬಲ ಸಾಕ್ಷ್ಯವಿದ್ದರೂ ಐಸಿಜೆಗೆ ತೆರಳುವ ಮುನ್ನ ಸರ್ಕಾರ ಯಾಕೆ ಸಿದ್ಧತೆ ನಡೆಸಿಲ್ಲ? ಇದು ನವಾಜ್–ಜಿಂದಾಲ್ ಭೇಟಿಯ ಪರಿಣಾಮವೇ?’ ಎಂದು ಹಿರಿಯ ರಾಜಕಾರಣಿ, ಪಾಕಿಸ್ತಾನದ ಮಾಜಿ ಉಪ ಪ್ರಧಾನಿ ಮೂನಿಸ್ ಇಲಾಹಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.