ADVERTISEMENT

ಜಿನ್‌ಪಿಂಗ್‌ಗೆ ಅಧಿಕಾರ: ಒಪ್ಪಿಗೆ

ಪಿಟಿಐ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST
ಜಿನ್‌ಪಿಂಗ್‌ಗೆ ಅಧಿಕಾರ: ಒಪ್ಪಿಗೆ
ಜಿನ್‌ಪಿಂಗ್‌ಗೆ ಅಧಿಕಾರ: ಒಪ್ಪಿಗೆ   

ಬೀಜಿಂಗ್‌: ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಎರಡನೇ ಅವಧಿಗೆ ಮುಂದುವರಿಸಲು ನ್ಯಾಷನಲ್‌ ಪೀಪಲ್ಸ್ ಕಾಂಗ್ರೆಸ್‌ (ಎನ್‌ಪಿಸಿ) ಸಂಸತ್ತು ಶನಿವಾರ ಒಪ್ಪಿದೆ.

ಜೊತೆಗೆ ಕೇಂದ್ರಿಯ ಸೇನಾ ಆಯೋಗದ ಮುಖ್ಯಸ್ಥರಾಗಿಯೂ ಅವರನ್ನು ಆಯ್ಕೆ ಮಾಡಲಾಗಿದೆ. ಚೀನಾ ಸೇನೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಇವರು ಅಧಿಕಾರ ಹೊಂದಿರುತ್ತಾರೆ.

ನೂತನ ಸಂಪುಟದಲ್ಲಿ  ವಿದೇಶಾಂಗ ಇಲಾಖೆ ಸಚಿವರಾಗಿರುವ ವಾಂಗ್‌ ಯಿ ಅವರಿಗೆ ಸ್ಟೇಟ್‌ ಕೌನ್ಸಿಲರ್‌ ಹುದ್ದೆಗೆ ಬಡ್ತಿ ನೀಡುವ ಸಾಧ್ಯತೆಯಿದೆ. ಇದರಿಂದಾಗಿ ಭಾರತ–ಚೀನಾ ಗಡಿ ಸಂಬಂಧಿ ವಿಚಾರಗಳ ಮಾತುಕತೆ ನಡೆಸಲು ಚೀನಾದ ವಿಶೇಷ ಪ್ರತಿನಿಧಿಯಾಗಿ ಅವರು ಕೆಲಸ ಮಾಡಲಿದ್ದಾರೆ. 

ADVERTISEMENT

ಷಿ ಅವರು ತಮ್ಮ ಜೀವಿತಾವಧಿಯವರೆಗೂ ಚೀನಾದ ಅಧ್ಯಕ್ಷರಾಗಿ ಮುಂದುವರಿಯುವ ಮಹತ್ವದ ತಿದ್ದುಪಡಿ ಮಸೂದೆಗೆ ಮಾರ್ಚ್‌ 11ರಂದು ಎನ್‌ಪಿಸಿ ಅಂಗೀಕಾರ ನೀಡಿತ್ತು. ಉಪಾಧ್ಯಕ್ಷರ ಆಯ್ಕೆ ಮೇಲೆಯೂ ಇದ್ದ ನಿರ್ಬಂಧವನ್ನು ಇದೇ ಕಾಯ್ದೆಯು ರದ್ದುಗೊಳಿಸಿತ್ತು.

ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ (ಸಿಪಿಸಿ) ಮುಖ್ಯಸ್ಥರೂ ಆಗಿರುವ ಷಿ, ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಾವೋ ಜೆಡಾಂಗ್‌ ಬಳಿಕ ಜೀವಿತಾವಧಿ ಅಧಿಕಾರ ಪಡೆಯುತ್ತಿರುವ ಎರಡನೇ ಅಧ್ಯಕ್ಷರಾಗಿದ್ದಾರೆ.

ಚೀನಾದ ಉಪಾಧ್ಯಕ್ಷರನ್ನಾಗಿ ಷಿ ಅವರ ಆಪ್ತ ವಾಂಗ್‌ ಕ್ವಿಶಾಂಗ್‌ ಅವರನ್ನು ಎನ್‌ಪಿಸಿ ಆಯ್ಕೆ ಮಾಡುವ ಸಂಭವವಿದೆ.

2013ರಲ್ಲಿ ಕ್ಷಿ ಆರಂಭಿಸಿದ್ದ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಮುನ್ನಡೆಸಿದವರು ವಾಂಗ್‌. ಈ ಅಭಿಯಾನದಲ್ಲಿ, ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಸಚಿವರು ಸೇರಿ ಸುಮಾರು 15 ಲಕ್ಷಕ್ಕೂ ಹೆಚ್ಚಿನ ಅಧಿಕಾರಿಗಳು ಶಿಕ್ಷೆಗೆ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.