ADVERTISEMENT

ಜೆರುಸಲೇಂ: ವೆಸ್ಟ್‌ಬ್ಯಾಂಕ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ

ಪಿಟಿಐ
Published 8 ಡಿಸೆಂಬರ್ 2017, 19:30 IST
Last Updated 8 ಡಿಸೆಂಬರ್ 2017, 19:30 IST
ಜೆರುಸಲೇಂ: ವೆಸ್ಟ್‌ಬ್ಯಾಂಕ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ
ಜೆರುಸಲೇಂ: ವೆಸ್ಟ್‌ಬ್ಯಾಂಕ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ   

ಜೆರುಸಲೇಂ/ ವಾಷಿಂಗ್ಟನ್: ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರ ವಿರೋಧಿಸಿ ಶುಕ್ರವಾರ ವೆಸ್ಟ್ ಬ್ಯಾಂಕ್ ಹಾಗೂ ಗಾಜಾದಲ್ಲಿ ಪ್ಯಾಲೆಸ್ಟೀನಿಯರು ಇಸ್ರೇಲ್‌ ಸೇನೆಯೊಂದಿಗೆ ಸಂಘರ್ಷ ನಡೆಸಿದರು. ಜತೆಗೆ ಜೋರ್ಡಾನ್‌ನಿಂದ ಇಂಡೋನೇಷ್ಯಾವರೆಗೂ ಮುಸ್ಲಿಮರು ಸಂಜೆ ಪ್ರಾರ್ಥನೆ ಬಳಿಕ ರಸ್ತೆಗಿಳಿದು ಪ್ರತಿಭಟಿಸಿದರು.

ಇಸ್ರೇಲ್‌ ಹಾಗೂ ಅಮೆರಿಕದ ಧ್ವಜಗಳನ್ನು ಸುಟ್ಟುಹಾಕಿದ ಪ್ರತಿಭಟನಾಕಾರರು ಟ್ರಂಪ್ ಭಾವಚಿತ್ರ ತುಳಿದು ಆಕ್ರೋಶ ವ್ಯಕ್ತಪಡಿಸಿದರು.

‘ವಾಸ್ತವ ಆಧರಿಸಿದೆ’: ತನ್ನ ನಿಲುವಿನಿಂದ ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗುತ್ತಿದ್ದಂತೆಯೇ, ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾನ್ಯ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ವಾಸ್ತವಾಂಶಗಳನ್ನು ಆಧರಿಸಿದೆ ಎಂದು ಶ್ವೇತಭವನ ಸಮರ್ಥನೆ ನೀಡಿದೆ.

ADVERTISEMENT

ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆ ಪ್ರಕ್ರಿಯೆಗೆ ಅಮೆರಿಕ ಬದ್ಧವಾಗಿದೆ ಎಂದೂ ಶ್ವೇತಭವನ ಇದೇ ವೇಳೆ ಹೇಳಿದೆ.

ಸ್ವಾಗತ ಇಲ್ಲ: ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರಿಗೆ ‘ಪ್ಯಾಲೆಸ್ಟೀನ್‌ಗೆ ಸ್ವಾಗತ ಇಲ್ಲ’ ಎಂದು ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹ್ಮುದ್ ಅಬ್ಬಾಸ್ ಅವರ ಫತಾ ಪಕ್ಷದ ಹಿರಿಯ ಸದಸ್ಯ ಜಿಬ್ರಿಲ್ ರಜೌಬ್ ಹೇಳಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಪೆನ್ಸ್‌ ಅವರು ಪ್ಯಾಲೆಸ್ಟೀನ್‌ಗೆ ತೆರಳುವುದು ನಿಗದಿಯಾಗಿದೆ.

‘ಜೆರುಸಲೇಂ ಕುರಿತು ನೀಡಿದ ಹೇಳಿಕೆಯಿಂದಾಗಿ ಪೆನ್ಸ್ ಅವರನ್ನು ಅಬ್ಬಾಸ್‌ ಅವರು ಸ್ವಾಗತಿಸುವುದಿಲ್ಲ’ ಎಂದು ರಜೌಬ್ ಹೇಳಿದ್ದಾರೆ. ಟ್ರಂಪ್ ಘೋಷಣೆಗೆ ಬೆಂಬಲ ವ್ಯಕ್ತಪಡಿಸಿ ಪೆನ್ಸ್ ಹೇಳಿಕೆ ನೀಡಿದ್ದರು.

**

‘ಎರಡು ವರ್ಷ ಬೇಕಾಗಲಿದೆ’

ಪ್ಯಾರಿಸ್‌: ಅಮೆರಿಕದ ರಾಯಭಾರ ಕಚೇರಿಯನ್ನು ಟೆಲ್‌ಅವಿವ್‌ನಿಂದ ಜೆರುಸಲೇಂಗೆ ಸ್ಥಳಾಂತರಿಸಲು ಎರಡು ವರ್ಷ ಬೇಕಾಗುತ್ತದೆ ಎಂದು ಅಮೆರಿಕದ ಕಾರ್ಯದರ್ಶಿ ರೆಕ್ಸ್‌ ಟಿಲ್ಲರ್‌ಸನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.