ADVERTISEMENT

ಟರ್ಕಿಯಲ್ಲಿ ಭೂಕಂಪ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಅಂಕಾರ (ಎಎಫ್‌ಪಿ): ಪೂರ್ವ ಟರ್ಕಿಯ ವ್ಯಾನ್ ನಗರದಲ್ಲಿ ಭಾನುವಾರ ಸಂಜೆ ಪ್ರಬಲ ಭೂಕಂಪ ಸಂಭವಿಸಿದ್ದು, ಸುಮಾರು ಒಂದು ಸಾವಿರ ಜನ ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಅಂತರರಾಷ್ಟ್ರೀಯ ಕಾಲಮಾನ ಸಂಜೆ 4.16ರ ವೇಳೆಯಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.3ರಷ್ಟಿತ್ತು. ಅನೇಕ ಕಟ್ಟಡಗಳು ನೆಲಸಮವಾಗಿವೆ ಎಂದು ಭೂಕಂಪ ತಜ್ಞರು ತಿಳಿಸಿದ್ದಾರೆ.

ಕಟ್ಟಡಗಳು ನೆಲಸಮವಾಗಿರುವುದರ ಜತೆಗೆ ದೂರಸಂಪರ್ಕ ಜಾಲ ಸಹ ಕಡಿತಗೊಂಡಿದೆ. ಹಾಗಾಗಿ ಸಂತ್ರಸ್ತರನ್ನು ತಲುಪಲು ರಕ್ಷಣಾ ಕಾರ್ಯಕರ್ತರಿಗೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಸಿದು ಬಿದ್ದಿರುವ ಕಟ್ಟಡಗಳ ಅಡಿಯಲ್ಲಿ ಸಾವಿರಾರು ಮಂದಿ ಸಿಲುಕಿರುವ ಶಂಕೆ ಇದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇತ್ತೀಚಿನ ವರ್ಷಗಳಲ್ಲಿ ಈ ದೇಶದಲ್ಲಿ ಸಂಭವಿಸಿರುವ ಭೀಕರ ಭೂಕಂಪ ಇದಾಗಿದೆ ಎಂದು ಭೂಗರ್ಭಶಾಸ್ತ್ರಜ್ಞರು ತಿಳಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ಐನೂರರಿಂದ ಸಾವಿರ ಮಂದಿ ಸತ್ತಿರುವ ಶಂಕೆ ಇದೆ ಎಂದು ಇಸ್ತಾನ್‌ಬುಲ್‌ನಲ್ಲಿರುವ ಕಂದಿಲ್ ಭೂಕಂಪಶಾಸ್ತ್ರಜ್ಞರ ಸಂಸ್ಥೆಯ ನಿರ್ದೇಶಕ ಮುಸ್ತಫಾ ಇರ್ದಿಕ್ ತಿಳಿಸಿದ್ದಾರೆ.
ಗಾಯಗೊಂಡಿರುವವರನ್ನು ತಕ್ಷಣ ಅಂತೋಲಿಯಾದಲ್ಲಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾರಿ ಪ್ರಮಾಣದ ಸಾವು ಮತ್ತು ಇತರ ಹಾನಿಯಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಪ್ರಧಾನ ಮಂತ್ರಿ ಕಚೇರಿಯನ್ನು ಉಲ್ಲೇಖಿಸಿ ಹೇಳಿಕೆ ನೀಡಿದೆ.

ಬಹುಅಂತಸ್ತಿನ ಹಲವಾರು ಕಟ್ಟಡಗಳು, ಹೋಟೆಲ್‌ಗಳು ಕುಸಿದು ಬಿದ್ದಿವೆ. ಕುಸಿದು ಬಿದ್ದಿರುವ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವ ಜನರು ಸಹಾಯಕ್ಕೆ ಅಂಗಲಾಚುತ್ತಿರುವ ಶಬ್ದಗಳು ಕೇಳಿ ಬರುತ್ತಿರುವುದಾಗಿ ವ್ಯಾನ್‌ನ ಸ್ಥಳೀಯ ಅಧಿಕಾರಿ ವೈಸೆಲ್ ಕೀಸರ್ ತಿಳಿಸಿದ್ದಾರೆ.

ವಿದ್ಯುತ್, ದೂರಸಂಪರ್ಕ ಜಾಲ ಪೂರ್ಣ ಪ್ರಮಾಣದಲ್ಲಿ ಕುಸಿದು ಬಿದ್ದಿದ್ದು, ರಕ್ಷಣಾ ಕಾರ್ಯಕರ್ತರು ನಿಗದಿತ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ.

ಮೊದಲ ಭೂಕಂಪದ ನಂತರ ಪುನಃ ಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.6ರ ತೀವ್ರತೆ ಹೊಂದಿತ್ತು. ಹಾಗಾಗಿ ಜನರು ಆತಂಕಗೊಂಡಿದ್ದು, ಪ್ರಾಣ ರಕ್ಷಣೆಗಾಗಿ ಬೀದಿಗಳಿಗೆ ಓಡಿಬಂದಿದ್ದಾರೆ ಎಂದು ವ್ಯಾನ್‌ನ ಮೇಯರ್ ಬೇಕಿರ್ ಕಯಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಂಪರ್ಕ ಜಾಲ ಕಡಿತಗೊಂಡಿರುವ ಕಾರಣದಿಂದ ಈ ಪ್ರದೇಶಕ್ಕೆ ಸ್ಯಾಟಲೈಟ್ ಫೋನ್‌ಗಳನ್ನು ಕಳುಹಿಸಲು ಸರ್ಕಾರ ವ್ಯವಸ್ಥೆ ಮಾಡಿದೆ. ವ್ಯಾನ್‌ನ ಈಶಾನ್ಯ ಭಾಗಕ್ಕೆ 19 ಕಿ.ಮೀ ದೂರದಲ್ಲಿರುವ ತಬಾನ್‌ಲಿಯಲ್ಲಿ ಭೂಕಂಪನದ ಕೇಂದ್ರ ಬಿಂದು ಇತ್ತು. ಅಮೆರಿಕ ಭೂಗರ್ಭಶಾಸ್ತ್ರಜ್ಞರ ಪ್ರಕಾರ ಮೊದಲ ಕಂಪನ ಭೂಮಿಯ ಒಳಭಾಗದ 7.2 ಕಿ.ಮೀ ಆಳದಲ್ಲಿ ಇತ್ತು. ಆದರೆ ಎರಡನೇ ಕಂಪನವು ಭೂಮಿಯ ಒಳಭಾಗದ ಇಪ್ಪತ್ತು ಕಿ.ಮೀ ಆಳದಲ್ಲಿ ಇತ್ತು ಎಂದೂ ಅವರು ತಿಳಿಸಿದ್ದಾರೆ.

ವ್ಯಾನ್‌ನ ವಿಮಾನ ನಿಲ್ದಾಣವೂ ಹಾನಿಗೆ ಒಳಗಾಗಿದೆ. ಆದರೆ ವಾಯು ಸಂಚಾರಕ್ಕೆ ಇದರಿಂದ ತೊಂದರೆ ಆಗಿಲ್ಲ ಎಂದು ಅಂತೋಲಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ವ್ಯಾನ್ ನಗರದಲ್ಲಿ 3.80 ಲಕ್ಷ ಜನರಿದ್ದಾರೆ.

ಪ್ರಮುಖವಾಗಿ ಕುರ್ದ್ ಸಮುದಾಯದವರಿದ್ದಾರೆ. ಈ ಪ್ರದೇಶ ರಾಜಧಾನಿ ಅಂಕಾರದಿಂದ ಸುಮಾರು 1,200 ಕಿ.ಮೀ ದೂರದಲ್ಲಿದೆ. ದೇಶದ ವಾಯವ್ಯ ಭಾಗದಲ್ಲಿರುವ ಇರಾನ್‌ನ ಗಡಿ ಪ್ರದೇಶದಲ್ಲಿಯೂ ಭೂಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿದ್ದಾರೆ.

ಟರ್ಕಿ ಭೂಕಂಪ ಸಂಭಾವ್ಯ ಪ್ರದೇಶದಲ್ಲಿದ್ದು, ವಾಯವ್ಯ ಟರ್ಕಿಯಲ್ಲಿ 1999ರಲ್ಲಿ ಸಂಭವಿಸಿದ ಎರಡು ಭೀಕರ ಭೂಕಂಪದಲ್ಲಿ ಸುಮಾರು ಇಪ್ಪತ್ತು ಸಾವಿರ ಮಂದಿ ಸಾವನ್ನಪ್ಪಿದ್ದರು. 1976ರಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 3,840 ಜನ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.