ADVERTISEMENT

ಟಿಕೆಟ್ ಸಿಗದ ಕೋಪಕ್ಕೆ ಬಟ್ಟೆ ಕಳಚಿದ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಶಾಂಘೈ (ಐಎಎನ್‌ಎಸ್): ರೈಲ್ವೆ ಟಿಕೆಟ್ ಸಿಗದ ಕಾರಣ ತೀವ್ರವಾಗಿ ಹತಾಶನಾದ ವ್ಯಕ್ತಿಯೊಬ್ಬ ತನ್ನ ಬಟ್ಟೆಗಳನ್ನು ಕಳಚಿ,  ರೈಲ್ವೆ ಹಿರಿಯ ಅಧಿಕಾರಿಯೊಂದಿಗೆ ಜಗಳವಾಡಿದ ಘಟನೆ ಚೀನಾದ ಜೆಜಾಂಗ್ ಪ್ರಾಂತದಲ್ಲಿ  ನಡೆದಿದೆ. ಚೀನಾದ ಕೇಂದ್ರ ಭಾಗದ ಹೆನಾನ್ ಪ್ರಾಂತ್ಯದ ವಲಸೆ ಕಾರ್ಮಿಕ ಚೆನ್ ವೆವೆ ತನ್ನೂರಿಗೆ ರೈಲಿನಲ್ಲಿ ತೆರಳಲು ಟಿಕೆಟ್ ತೆಗೆದುಕೊಳ್ಳಲು ಈ ತಿಂಗಳ 17 ಮತ್ತು 18 ರಂದು ಸರದಿ ಸಾಲಿನಲ್ಲಿ ನಿಂತಿದ್ದ.

ಅದೂ ಬರೋಬ್ಬರಿ 14 ಗಂಟೆ ಕಾಲ. ಆದರೂ ಆತನಿಗೆ ಟಿಕೆಟ್ ಸಿಗಲಿಲ್ಲ. ಬದಲಿಗೆ ಟಿಕೆಟ್‌ಗಳು ಪೂರ್ಣವಾಗಿ ಮೊದಲೇ ಮಾರಾಟವಾಗಿವೆ ಎಂಬ ಉತ್ತರ ಸಿಕ್ಕಿತು. ಇದರಿಂದ ಹತಾಶನಾದ ಆತ ಒಳಉಡುಪು ಹೊರತುಪಡಿಸಿ ಮೈಮೇಲಿದ್ದ ಬಟ್ಟೆಗಳನ್ನು ಕಳಚಿ, ನಿಲ್ದಾಣದ ಅಧಿಕಾರಿ ಕಚೇರಿಗೆ ತೆರಳಿ ತನ್ನ ಗೋಳು ತೋಡಿಕೊಂಡ. ಈ ಕುರಿತ ಛಾಯಾಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ ಎಂದು ಚೀನಾದ ಪತ್ರಿಕೆಯೊಂದು ವರದಿ ಮಾಡಿದೆ.

‘ಗರ್ಭೀಣಿ ಪತ್ನಿಯ ಜೊತೆ ಊರಿಗೆ ತೆರಳಲು ಉತ್ಸುಕನಾಗಿದ್ದೆ. ಟಿಕೆಟ್ ಪಡೆಯಲು ಹಲವು ಗಂಟೆಗಳ ಕಾಲ ಸಾಲಿನಲ್ಲಿ ನಿಂತರೂ ಯಾವುದೇ ಪ್ರಯೋಜನವಾಗಲಿಲ್ಲ’ ಎಂದು ಚೆನ್ ತಿಳಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.