ADVERTISEMENT

ಟಿಬೆಟ್: ಇಂಗ್ಲಿಷ್ ಕಲಿಕೆಗೆ ಹೆಚ್ಚಿದ ಒಲವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ಡಾಜಿ, ಟಿಬೆಟ್ (ಪಿಟಿಐ): ಟಿಬೆಟ್‌ನ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಈಗ ಇಂಗ್ಲಿಷ್ ಕಲಿಕೆಯತ್ತ ಆಕರ್ಷಿತರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.

ರಾಜಧಾನಿ ಲ್ಹಾಸಾ ಸೇರಿದಂತೆ ಗ್ರಾಮಗಳಲ್ಲೂ ಕೂಡಾ ಇಂಗ್ಲಿಷ್ ಕಲಿಸುವ ಅಲ್ಪಾವಧಿ ಕೋರ್ಸಿನ ತರಗತಿಗಳಿಗೆ ಬೇಡಿಕೆ ಹೆಚ್ಚಿದೆ. ಚೀನಾ ಸೇರಿದಂತೆ ಜಗತ್ತಿನ ಅನೇಕ ಕಡೆ ತಮ್ಮ ಜನಾಂಗದ ಭವಿಷ್ಯ ಉಜ್ವಲವಾಗಿರಲು ಹಾಗೂ ಹೆಚ್ಚಿನ ಉದ್ಯೋಗವಕಾಶಗಳನ್ನು ಗಿಟ್ಟಿಸಿಕೊಳ್ಳಲು ಇಂಗ್ಲಿಷ್ ಪ್ರಮುಖ ಸಾಧನ ಎಂಬುದೇ ಈ ಆಕರ್ಷಣೆ ಹೆಚ್ಚಲು ಕಾರಣವಾಗಿದೆ ಎನ್ನುತ್ತಾರೆ ಇಲ್ಲಿನ ಇಂಗ್ಲಿಷ್ ಶಿಕ್ಷಕ ತೆಶಿತ್‌ಸೆತೆನ್.

`ಇಂಗ್ಲಿಷ್ ಕಲಿಕೆಯಲ್ಲಿ ಭಾರತೀಯರನ್ನು ಸರಿಗಟ್ಟಬೇಕೆಂಬುದು ಇಲ್ಲಿನ ವಿದ್ಯಾರ್ಥಿಗಳ ಅನಿಸಿಕೆ. ಸಹಜವಾಗಿಯೇ ಇಂದಿನ ಯುವ ಜನಾಂಗ ಈಗ ಇಂಗ್ಲಿಷ್‌ನತ್ತ ಹೆಚ್ಚಿನ ಆಸಕ್ತಿಯನ್ನು ನೀಡುತ್ತಿದೆ.
ತಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು ಅನಿವಾರ್ಯ ಎಂಬುದನ್ನು ಗ್ರಾಮೀಣ ಪ್ರದೇಶದ ಜನರೂ ಮನಗಂಡಿದ್ದಾರೆ. ಹೀಗಾಗಿ ಇತ್ತೀಚೆಗಂತೂ ಇಂಗ್ಲಿಷ್ ಕಲಿಕೆಗೆ ಹಾತೊರೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ~ ಎಂಬುದು ತೆಶಿತ್‌ಸೆತೆನ್ ಅವರ ನುಡಿ.

ಬರೀ ಇಂಗ್ಲಿಷ್ ಮಾತ್ರವಲ್ಲದೆ ಇದಕ್ಕೆ ಪೂರಕವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕೋರ್ಸ್‌ಗಳಿಗೂ ಇಲ್ಲಿನ ಕಾಲೇಜುಗಳಲ್ಲಿ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.