ADVERTISEMENT

ಟಿಬೆಟ್ ಬಿಕ್ಕಟ್ಟು ಶಮನಕ್ಕೆ ನೆರವು- ಕೃಷ್ಣ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST

ಬೀಜಿಂಗ್ (ಪಿಟಿಐ): ಟಿಬೆಟ್ ಸಮಸ್ಯೆ ಚೀನಾದ ಆಂತರಿಕ ವಿಚಾರ ಎಂದು ಹೇಳಿರುವ ಭಾರತ, ಅಲ್ಲಿನ ಬಿಕ್ಕಟ್ಟು ತಿಳಿಗೊಳಿಸಲು ನೆರವು ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದೆ.

ಮೂರು ದಿನಗಳ ಚೀನಾ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಅವರು ಬುಧವಾರ ಅಲ್ಲಿನ ನಾಲ್ವರು ಹಿರಿಯ ಮುಖಂಡರನ್ನು ಭೇಟಿಯಾಗಿ ಸಮಾಲೋಚಿಸಿದರು. ಮಾತುಕತೆಯಲ್ಲಿ ಮುಖ್ಯವಾಗಿ ಟಿಬೆಟ್ ವಿಷಯ  ಚರ್ಚೆಯಾಯಿತು.

`ಸ್ವಾಯತ್ತ ಟಿಬೆಟ್ ಪ್ರಾಂತ್ಯವು ಚೀನಾದ ಭಾಗ ಎಂಬುದು ಭಾರತದ ಭಾವನೆಯಾಗಿದೆ. ನಾವು ಇದೀಗ ಆ ದೇಶದ ಆಂತರಿಕ ವ್ಯವಹಾರಗಳನ್ನು ನಿಭಾಯಿಸುತ್ತಿದ್ದೇವೆ. ಹಾಗಾಗಿ ನಾವು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬಿಕ್ಕಟ್ಟು ಶಮನಕ್ಕೆ ನಮ್ಮ ಕೈಲಾದ ನೆರವು ನೀಡಲು ಸಿದ್ಧ. ಆದರೆ ಅಂಥ ಸನ್ನಿವೇಶ ಬರುತ್ತದೆ ಎಂದು ನಾನು ಎಣಿಸುವುದಿಲ್ಲ~ ಎಂದು ಕೃಷ್ಣ ಸುದ್ದಿಗಾರರಿಗೆ ತಿಳಿಸಿದರು.

ಇತ್ತೀಚೆಗೆ 16 ಬೌದ್ಧ ಬಿಕ್ಕುಗಳು ಆತ್ಮಾಹುತಿಗೆ ಯತ್ನಿಸಿದ್ದರು. ಅಲ್ಲದೆ ಟಿಬೆಟ್ ಗಡಿಯ ಸಿಚುವಾನ್ ಪ್ರಾಂತ್ಯದಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರು ಸಾವಿಗೀಡಾಗಿದ್ದರು.

ರಾಯಭಾರ ಕಚೇರಿ ಉದ್ಘಾಟನೆ: ಕೃಷ್ಣ ಅವರು ಬೀಜಿಂಗ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಉದ್ಘಾಟಿಸಿದರು.

ಚೀನಾದ ವಿದೇಶಾಂಗ ಸಚಿವ ಯಾಂಗ್ ಜೈಚಿ, ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿಯ (ಸಿಪಿಸಿ) ಅಂತರ ರಾಷ್ಟ್ರೀಯ ವಿಭಾಗದ ಹಿರಿಯ ಅಧಿಕಾರಿ ವಾಂಗ್ ಜೈರು, ಭಾರತದೊಂದಿಗಿನ ಗಡಿ ವಿವಾದ ಚರ್ಚೆಗೆ ಸಂಬಂಧಿಸಿದ ಚೀನಾದ ವಿಶೇಷ ಪ್ರತಿನಿಧಿ ದೈ ಬಿಂಗುವಾ ಮತ್ತಿತರರ ಜತೆ ಕೂಡ ಕೃಷ್ಣ ಮಾತುಕತೆ ನಡೆಸಲಿದ್ದಾರೆ.

ಚೀನಾ ಆಶಯ:  ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಸಮಾಧಾನ ವ್ಯಕ್ತಪಡಿಸಿರುವ ಚೀನಾ, ಉಭಯ ದೇಶಗಳ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ ಎಂದು ಹೇಳಿದೆ.

`ಎರಡೂ ದೇಶಗಳ ಸಂಬಂಧ ಸಾಕಷ್ಟು ಸುಧಾರಿಸಿರುವುದು ಸಂತೋಷದ ಸಂಗತಿ~ ಎಂದು ಆಡಳಿತಾರೂಢ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯ ಝು ಯಾಂಕಾಂಗ್, ಕೃಷ್ಣ ಅವರನ್ನು ಬರಮಾಡಿಕೊಂಡ ವೇಳೆ ಹೇಳಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT