ADVERTISEMENT

ಡಿಆರ್‌ಡಿಒ ರೂಪಿಸಿದ ಸ್ಫೋಟಕ ಪತ್ತೆ ಕಿಟ್

ಅಮೆರಿಕದಲ್ಲಿ ತಯಾರಿಕೆ, ವಿಶ್ವದಾದ್ಯಂತ ಮಾರಾಟ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಭಾರತದ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ರೂಪಿಸಿರುವ ಅತ್ಯಾಧುನಿಕ ಸ್ಫೋಟಕ ಪತ್ತೆ ಕಿಟ್‌ನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಜಗತ್ತಿನಾದ್ಯಂತ ಮಾರುಕಟ್ಟೆಗೆ ಬಿಡುಗಡಲು ಅಮೆರಿಕ ಮುಂದಾಗಿದೆ.

ಭಾರತ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ ಸಾಧನವೊಂದನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲು ಅಮೆರಿಕ ಮುಂದಾಗಿರುವುದು ಇದೇ ಮೊದಲು. ಸೌತ್ ಕ್ಯಾರೊಲಿನಾ ಮೂಲದ ಕ್ರೋವ್ ಅಂಡ್ ಕಂಪೆನಿ ಈ ಕಿಟ್‌ನ್ನು ತಯಾರಿಸಲಿದೆ.

ಇಲ್ಲಿನ ಶ್ವೇತಭವನದ ಹತ್ತಿರವೇ ಇರುವ ಅಮೆರಿಕದ ವಾಣಿಜ್ಯೋದ್ಯಮ ಸಂಘದ ಕಟ್ಟಡದಲ್ಲಿ ಈ ಸ್ಫೋಟಕ ಪತ್ತೆ ಕಿಟ್‌ನ್ನು ಶುಕ್ರವಾರ ಅನಾವರಣಗೊಳಿಸಲಾಯಿತು.
`ತಂತ್ರಜ್ಞಾನದ ವಿನಿಮಯವು ಕೇವಲ ಒಮ್ಮುಖವಾಗಿರದೆ ದ್ವಿಮುಖಿ ಯಾಗಿರ ಬೇಕು ಎಂಬುದು ನಮ್ಮ ಆಶಯ. ಈ ಕಿಟ್ ಉತ್ಪಾದನೆಗೆ ಸಂಬಂಧಿಸಿದಂತೆ ಭಾರತ- ಅಮೆರಿಕ ನಡುವೆ ಈಗ ಏರ್ಪಟ್ಟಿರುವ ಒಪ್ಪಂದ ಅದಕ್ಕೊಂದು ಅತ್ಯುತ್ತಮ ಉದಾಹರಣೆ' ಎಂದು ಮಾಜಿ ರಕ್ಷಣಾ ಕಾರ್ಯದರ್ಶಿ ವಿಲಿಯಮ್ ಎಸ್.ಕೊಹೆನ್ ಹೇಳಿದರು.

ಡಿಆರ್‌ಡಿಒ ಅಧೀನ ಘಟಕವಾದ ಹೈ ಎನರ್ಜಿ ಮಟೀರಿಯಲ್ ರೀಸರ್ಜ್ ಲ್ಯಾಬೊರೇಟರಿ ಈ ಕಿಟ್ ಅಭಿವೃದ್ಧಿಪಡಿಸಿದೆ. ನೈಟ್ರೊ ಎಸ್ಟರ್, ನೈಟ್ರಮೈನ್, ಟ್ರೈನೈಟ್ರೊಟಾಲಿನ್, ಡೈನಮೈಟ್ ಅಥವಾ ಬ್ಲ್ಯಾಕ್ ಪೌಡರ್ ಬಳಕೆಯಿಂದ ತಯಾರಾದ ಯಾವುದೇ ಸ್ಫೋಟಕವನ್ನು ಸಾಧಾರಣ ತಾಪಮಾನದ ಸ್ಥಿತಿಯಲ್ಲಿ ಇದು 2-3 ನಿಮಿಷಗಳೊಳಗೆ ಪತ್ತೆ ಮಾಡುತ್ತದೆ.

ಈ ಹಿಂದಿನ ಎಲೆಕ್ಟ್ರಾನಿಕ್ ಸ್ಫೋಟಕ ಪತ್ತೆ ಸಾಧನಗಳಿಂದ ಆರ್‌ಡಿಎಕ್ಸ್ ಬಳಸಿ ತಯಾರಾದ ಪ್ಲ್ಯಾಸ್ಟಿಕ್ ಸ್ಫೋಟಕಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ಆದರೆ ರಾಸಾಯನಿಕ ಆಧಾರಿತ ಈ ಕಿಟ್ ಅದನ್ನೂ ಪತ್ತೆ ಹಚ್ಚಲಿದೆ.

ಒಂದೆಡೆಯಿಂದ ಮತ್ತೊಂದೆಡೆಗೆ ಸುಲಭವಾಗಿ ಕೊಂಡೊಯ್ಯಬಹುದಾದ ಈ ಕಿಟ್ ಕಲುಷಿತ ವಾತಾವರಣದಲ್ಲೂ ನಿಖರ ಫಲಿತಾಂಶ ನೀಡುತ್ತದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT