ADVERTISEMENT

ಡಿ.ಜೆ.ಗಳ ತಪ್ಪಿನ ಪರಾಮರ್ಶೆ

ಜೆಸಿಂತಾ ಆತ್ಮಹತ್ಯೆ: ಸಿಪಿಎಸ್‌ಗೆ ಕಡತ ರವಾನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ಲಂಡನ್ (ಪಿಟಿಐ): ಭಾರತ ಮೂಲದ ನರ್ಸ್ ಜೆಸಿಂತಾ ಸಲ್ಡಾನಾ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಬ್ರಿಟನ್ ಪೊಲೀಸರು, ಘಟನೆ ಕುರಿತ ಕಡತವನ್ನು ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (ಸಿಪಿಎಸ್)ಗೆ ನೀಡಿದ್ದು, ಆಸ್ಟ್ರೇಲಿಯಾದ ಇಬ್ಬರು ಡಿ.ಜೆ.ಗಳು ನಿಜಕ್ಕೂ ತಪ್ಪು ಎಸಗಿದ್ದಾರೆಯೇ ಎನ್ನುವುದನ್ನು ಅದು ಪರಾಮರ್ಶಿಸಲಿದೆ.

ಬ್ರಿಟನ್ ರಾಜಮನೆತನಕ್ಕೆ ಸೇರಿದವರು ಎಂದು ಸುಳ್ಳು ಹೇಳಿ ಆಸ್ಟ್ರೇಲಿಯಾದ ಇಬ್ಬರು ಡಿ.ಜೆ.ಗಳು ಡಿಸೆಂಬರ್ 4ರಂದು ಕಿಂಗ್ ಎಡ್ವರ್ಡ್ ಆಸ್ಪತ್ರೆಗೆ ಕರೆ ಮಾಡಿದ್ದರು. ಅಲ್ಲಿ ನರ್ಸ್ ಆಗಿದ್ದ ಜೆಸಿಂತಾ ಅವರು ಡಿ.ಜೆ.ಗಳ ಕರೆಯನ್ನು ಕೇಟ್ ಅವರಿಗೆ ಶುಶ್ರೂಷೆ ಮಾಡುತ್ತಿದ್ದ ನರ್ಸ್‌ಗೆ ರವಾನಿಸಿದ್ದರು. ಕೇಟ್ ಗರ್ಭಿಣಿಯಾಗಿರುವುದು ಮತ್ತು ಬೆಳಗಿನ ಬಳಲಿಕೆಯ ವಿಷಯ ತಿಳಿದುಕೊಂಡಿದ್ದರು.

ಬಳಿಕ ಕೇಟ್ ಗರ್ಭಿಣಿಯಾಗಿರುವ ವಿಷಯ ಜಗತ್ತಿನಾದ್ಯಂತ ಹರಡಿತ್ತು. ಇದರಿಂದ ತೀವ್ರ ಮನನೊಂದಿದ್ದ 46 ವರ್ಷದ ಸಲ್ಡಾನಾ ಡಿಸೆಂಬರ್ 7ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಸಾಯುವುದಕ್ಕೂ ಮುನ್ನ ಮೂರು ಪತ್ರಗಳನ್ನು ಬರೆದಿಟ್ಟಿದ್ದರು. ಒಂದು ಪತ್ರದಲ್ಲಿ ಡಿ.ಜೆ.ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಘಟನೆಗೆ ಅವರೇ ಕಾರಣರು ಎಂದು ವಿವರಿಸಿದ್ದರು.

`ಕೀಟಲೆ ಕರೆ ಮಾಡಿ ತಪ್ಪು ಎಸಗಿದ್ದಾರೆಯೇ' ಎನ್ನುವ ಕುರಿತು ಪರಿಶೀಲಿಸಲು ತನಿಖಾಧಿಕಾರಿಗಳು ಸಿಪಿಎಸ್‌ಗೆ ಕಡತವನ್ನು ರವಾನಿಸಿದ್ದಾರೆ ಎಂದು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಸಿಡ್ನಿಯ ಟು ಡೇ ಎಫ್.ಎಂ. ರೇಡಿಯೊ ಕೇಂದ್ರದ ಡಿ.ಜೆ.ಗಳಾದ ಮೆಲ್ ಗ್ರೇಗ್ ಮತ್ತು ಮೈಕಲ್ ಕ್ರಿಸ್ಟಿಯನ್ ಅವರು ಸುಳ್ಳು ಕರೆ ಮಾಡಿ ಬ್ರಿಟನ್ ರಾಜಮನೆತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಂಡಿದ್ದಾರೆ. ಅಂಕಿ-ಅಂಶ ಸಂರಕ್ಷಣಾ ಕಾಯ್ದೆ (ಡಾಟಾ ಪ್ರೊಟೆಕ್ಷ್ ಆ್ಯಕ್ಟ್) ಉಲ್ಲಂಘಿಸಿದ್ದಾರೆಯೇ ಎನ್ನುವುದನ್ನು ಪರಿಶೀಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ತಪ್ಪಾಗಿದೆ ಎನ್ನುವುದು ಕಂಡುಬಂದರೆ ಇಬ್ಬರು ರೇಡಿಯೊ ನಿರೂಪಕರನ್ನು ಆಸ್ಟ್ರೇಲಿಯಾದಿಂದ ಬ್ರಿಟನ್‌ಗೆ ಹಸ್ತಾಂತರ ಮಾಡಿಕೊಳ್ಳಲಾಗುವುದೇ ಎಂಬುದು ಸಿಪಿಎಸ್ ಕಡತಗಳನ್ನು ಪರಿಶೀಲಿಸಿದ ಬಳಿಕವಷ್ಟೇ ಗೊತ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.