ADVERTISEMENT

ತನಿಖೆ ಆರಂಭಿಸಿದ ನ್ಯಾಯಾಂಗ ಆಯೋಗ

ಪಾಕ್ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಸಾವು

​ಪ್ರಜಾವಾಣಿ ವಾರ್ತೆ
Published 9 ಜೂನ್ 2013, 19:59 IST
Last Updated 9 ಜೂನ್ 2013, 19:59 IST

ಲಾಹೋರ್ (ಪಿಟಿಐ): ಭಾರತದ ಪ್ರಜೆ ಸರಬ್ಜಿತ್ ಸಿಂಗ್ ಸಾವಿನ ತನಿಖೆಯನ್ನು ಲಾಹೋರ್ ಹೈಕೋರ್ಟ್‌ನ ನ್ಯಾಯಾಂಗ ಆಯೋಗ ಭಾನುವಾರ ಆರಂಭಿಸಿದೆ.

ನ್ಯಾಯಾಂಗ ಆಯೋಗದ ಮುಖ್ಯಸ್ಥ, ನ್ಯಾಯಮೂರ್ತಿ ಮಜರ್ ಅಲಿ ಅಕ್ಬರ್ ನಕ್ವಿ ಅವರು ಭಾನುವಾರ ಸರಬ್ಜಿತ್ ಸಿಂಗ್ ಅವರನ್ನು ಬಂಧಿಸಿಟ್ಟಿದ್ದ ಇಲ್ಲಿನ ಕೋಟ್ ಲಖಪತ್ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದರು. ಜೈಲಿನ ಹಲವು ಕೈದಿಗಳನ್ನು ಈ ಸಂಬಂಧ ವಿಚಾರಿಸಿದರು. ಅಲ್ಲದೇ ಸರಬ್ಜಿತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳಿಂದ ಸಂಗ್ರಹಿಸಿದರು.

`ನ್ಯಾಯಾಂಗ ಆಯೋಗವು ಕೆಲ ಕೈದಿಗಳನ್ನು ಘಟನೆ ಸಂಬಂಧ ಪ್ರಶ್ನಿಸಿದೆ. ದಾಖಲೆಗಳನ್ನು ಕೂಡ ಕಲೆ ಹಾಕಿದೆ' ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಬುಶ್ರಾ ಜಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಘಟನೆ ಸಂಬಂಧ ಸಾಕ್ಷ್ಯ ಮತ್ತು ಹೇಳಿಕೆ ದಾಖಲಿಸುವ ಸಂಬಂಧ ನ್ಯಾಯಾಂಗ ಆಯೋಗವು ವಿದೇಶಾಂಗ ಸಚಿವಾಲಯದ ಮೂಲಕ ಸರಬ್ಜಿತ್ ಕುಟುಂಬಕ್ಕೆ ಈಗಾಗಲೇ ನೋಟಿಸ್ ನೀಡಿದೆಎಂದಿದ್ದಾರೆ.

ಸ್ಥಳೀಯ ಸಾಕ್ಷ್ಯಗಳ ಹೇಳಿಕೆ ದಾಖಲು ಮಾಡಿಕೊಳ್ಳಬೇಕಾಗಿರುವುದರಿಂದ ಜೂನ್ 10ರಂದು ಆಯೋಗದ ಮುಂದೆ ಹಾಜರಾಗುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಘಟನೆ ಬಹಳ ಮಹತ್ವ ಪಡೆದುಕೊಂಡಿರುವುದರಿಂದ ಆಯೋಗ ಆದಷ್ಟು ಬೇಗ ವಾಸ್ತವಾಂಶ ಕುರಿತ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದೆ. ಅದಕ್ಕೂ ಮುನ್ನ ಆಯೋಗ, ಸರಬ್ಜಿತ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಅದೇ ಜೈಲಿನ ಇಬ್ಬರು ಕೈದಿಗಳು, ಜೈಲಿನ ಅಧಿಕಾರಿಗಳಿಂದ ಹೇಳಿಕೆ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.