ADVERTISEMENT

ತಪ್ಪು ಮಾಡಿದ್ದರೆ ಕ್ಷಮಿಸಿ: ಪರ್ವೇಜ್‌ ಮುಷರಫ್‌ ಮನವಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST
ತಪ್ಪು ಮಾಡಿದ್ದರೆ ಕ್ಷಮಿಸಿ: ಪರ್ವೇಜ್‌ ಮುಷರಫ್‌ ಮನವಿ
ತಪ್ಪು ಮಾಡಿದ್ದರೆ ಕ್ಷಮಿಸಿ: ಪರ್ವೇಜ್‌ ಮುಷರಫ್‌ ಮನವಿ   

ಇಸ್ಲಾಮಾಬಾದ್‌ (ಪಿಟಿಐ): ಒಂಬತ್ತು ವರ್ಷಗಳ ಆಡಳಿತದಲ್ಲಿ ತಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಬೇಕು ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ತಿಳಿಸಿದ್ದಾರೆ.

ತಮ್ಮ ವಿರುದ್ಧ ಹೂಡಲಾಗಿರುವ ಪ್ರಕರಣಗಳಿಂದ ಅಂಜಿ ದೇಶ ಬಿಟ್ಟು ಪಲಾಯನ ಮಾಡುವುದಿಲ್ಲ, ಬದಲಿಗೆ ಈ ಪ್ರಕರಣಗಳನ್ನು ಎದುರಿಸುವುದಾಗಿ ಅವರು ನ್ಯೂಸ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಎಂಟು ತಿಂಗಳ ಹಿಂದೆ ಅವರ ತೋಟದ ಮನೆಯಲ್ಲಿ ಗೃಹ ಬಂಧನಕ್ಕೆ  ಒಳಗಾದ ನಂತರ ಇದೇ ಮೊದಲ ಬಾರಿಗೆ ಅವರು ಮಾಧ್ಯಮದ ಜತೆ ಮಾತನಾಡಿದ್ದಾರೆ.

ಅಧಿಕಾರಾವಧಿಯಲ್ಲಿ ದೇಶದ ಒಳಿತಿಗಾಗಿ ತೆಗೆದುಕೊಂಡ ಕ್ರಮದಿಂದ ಕೆಲವು ತಪ್ಪುಗಳು ಆಗಿರಬಹುದು. ಆದರೆ ವೈಯಕ್ತಿಕ ಲಾಭಕ್ಕಾಗಿ ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಆದರೂ ತಾವು ಮಾಡಿರುವ ತಪ್ಪಿಗೆ ಕ್ಷಮೆ ಯಾಚಿಸುವುದಾಗಿ ಮುಷರಫ್‌ ತಿಳಿಸಿದ್ದಾರೆ. ಪ್ರಕರಣಗಳಿಗೆ ಹೆದರಿ ದೇಶ ಬಿಟ್ಟು ಓಡಿಹೋಗುವುದಿಲ್ಲ, ಎಲ್ಲಾ ಕಾನೂನು ಕ್ರಮಗಳನ್ನು ಎದುರಿಸುವುದಾಗಿಯೂ ಅವರು ಹೇಳಿದ್ದಾರೆ.

ತಾಲಿಬಾನ್‌ ಉಗ್ರರ ಜತೆ ಮಾತುಕತೆಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಟೀಕಿಸಿರುವ ಅವರು, ಉಗ್ರರ ಜತೆ ಮಾತುಕತೆ ನಡೆಸುವ ಬದಲು ಅಧಿಕಾರ ಬಳಸಿ ಕ್ರಮಕ್ಕೆ ಮುಂದಾಗಬೇಕು ಎಂದು ಸಲಹೆ ಮಾಡಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಬೇಕಾದರೆ ಭಯೋತ್ಪಾದನೆಯನ್ನು ನಿಯಂತ್ರಿಸಬೇಕು ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಬೇಕು ಎಂದು ಅವರು  ಹೇಳಿದ್ದಾರೆ.

ಪಿಎಂಎಲ್‌ಎನ್‌ ಸರ್ಕಾರವು ಐಎಂಎಫ್‌ ಮುಂದೆ ಭಿಕ್ಷೆ ಬೇಡುವುದು ಸರಿಯಲ್ಲ ಎಂದು ಮುಷರಫ್ ನುಡಿದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.