ADVERTISEMENT

ತಾರೆಗಳ ಮಧ್ಯೆ ಕಡುಗಪ್ಪು ಹಗ್ಗ!

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ವಾಷಿಂಗ್ಟನ್ (ಪಿಟಿಐ): ಇದೇ ಮೊದಲ ಬಾರಿಗೆ ಖಗೋಳ ವಿಜ್ಞಾನಿಗಳು ಆಕಾಶಗಂಗೆ ಅಥವಾ ತಾರಾ ಸಮೂಹಗಳ ಮಧ್ಯೆ ಅಸ್ಪಷ್ಟವಾದ ದೈತ್ಯಾಕಾರದ ಹಗ್ಗ ಅಥವಾ ತಂತಿಯಂಥ ಕಡುಗಪ್ಪು ವಸ್ತುವನ್ನು ಪತ್ತೆಹಚ್ಚಿದ್ದಾರೆ.

ತಾರಾ ಸಮೂಹಗಳ ಮಧ್ಯೆ ಕೊಂಡಿಯಂತಿರುವ ಹಗ್ಗದಂಥ ವಸ್ತುಗಳು ಭೂಮಂಡಲ ಮತ್ತು ವಿಶ್ವದ ಮೂಲಕ ಹಾಯ್ದುಹೋಗಿವೆ. ಇಂತಹ ಅನೇಕ ಹಗ್ಗದಂಥ ಕಡುಗಪ್ಪು ವಸ್ತುಗಳ ಸಮೂಹ ವಿಶ್ವವನ್ನು ಸುತ್ತುವರೆದಿರಬಹುದಾದ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ.

ಸ್ಪಷ್ಟವಾಗಿ ಗೋಚರಿಸದ ಹಗ್ಗದಾಕಾರದ ಕಡುಗಪ್ಪು ವಸ್ತು ನಿರ್ದಿಷ್ಟವಾಗಿ ಏನನ್ನು ಒಳಗೊಂಡಿದೆ ಎಂಬುದನ್ನು ನಿರ್ಧರಿಸಲು ವಿಜ್ಞಾನಿಗಳು ವಿಫಲರಾಗಿದ್ದಾರೆ. ಕಣ್ಣಿಗೆ ಗೋಚರಿಸದ ಈ ವಸ್ತುಗಳನ್ನು ಗುರುತ್ವಾಕರ್ಷಣಾ ಶಕ್ತಿ ಹಿಡಿದಿಟ್ಟಿರುವ ಸಾಧ್ಯತೆ ಇದೆ ಎಂದು ಊಹಿಸಿದ್ದಾರೆ.

ಸೈದ್ಧಾಂತಿಕವಾಗಿ ಮಾತ್ರ ಅಸ್ತಿತ್ವದಲ್ಲಿದ್ದ ಈ ವಸ್ತುಗಳ ನಿಗೂಢತೆಯನ್ನು ಭೇದಿಸಲು ವಿಜ್ಞಾನಿಗಳು ಅನೇಕ ಪ್ರಯತ್ನಗಳನ್ನು ನಡೆಸಿದ್ದರೂ ಸಾಧ್ಯವಾಗಿರಲಿಲ್ಲ. ಇದೀಗ ಭೂಮಂಡಲದಿಂದ 2.7 ಶತಕೋಟಿ ಜ್ಯೋತಿರ್ವರ್ಷ ದೂರದಲ್ಲಿರುವ ಅಬೆಲ್ 222 ಮತ್ತು 223 ತಾರಾ ಸಮೂಹದ ಮಧ್ಯೆ ಕೊಂಡಿಯಂತೆ ನೇತು ಬಿದ್ದಿರುವ ಹಗ್ಗದಂಥ ಕಡುಗಪ್ಪು ವಸ್ತುವನ್ನು ಪತ್ತೆ ಹಚ್ಚುವಲ್ಲಿ ಖಗೋಳ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಗುರುತ್ವಾಕರ್ಷಣ ಶಕ್ತಿ ಈ ವಸ್ತುವನ್ನು ಹಿಡಿದಿಟ್ಟಿದ್ದು, ವಿಶ್ವದ ಉಗಮದ ಸಿದ್ಧಾಂತಕ್ಕೆ ಪೂರಕವಾಗಿವೆ ಎಂದು ಜರ್ಮನಿಯ ಮ್ಯೂನಿಚ್ ವಿಶ್ವವಿದ್ಯಾಲಯದ ಜಾರ್ಗ್ ಡೈಟ್ರಿಚ್ ಅಭಿಪ್ರಾಯಪಟ್ಟಿದ್ದಾರೆ. ಸದ್ಯದ ದೂರದರ್ಶಕ ಯಂತ್ರಗಳಿಂದ ಇವುಗಳ ವೀಕ್ಷಣೆ ಸಾಧ್ಯವಿಲ್ಲವಾದ ಕಾರಣ, ಅತ್ಯಾಧುನಿಕ ಮತ್ತು ಹೆಚ್ಚು ಸಾಮರ್ಥ್ಯದ ದೂರದರ್ಶಕ ಯಂತ್ರಗಳ ಅಗತ್ಯವಿದೆ. ಅಲ್ಲಿವರೆಗೂ ವಿಜ್ಞಾನಿಗಳು ಸಹ ಕಾಯುವ ಅನಿವಾರ್ಯತೆ ಇದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.