ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಭಾರತದ ಹಣಕಾಸು ಸಚಿವರ ನಿಯೋಗ

ತೆರಿಗೆ ಪದ್ಧತಿ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 19:59 IST
Last Updated 3 ಆಗಸ್ಟ್ 2013, 19:59 IST

ಜೋಹಾನ್ಸ್‌ಬರ್ಗ್ (ಪಿಟಿಐ): ಭಾರತದ ವಿವಿಧ ರಾಜ್ಯಗಳ ಹಣಕಾಸು ಸಚಿವರನ್ನೊಳಗೊಂಡ ನಿಯೋಗವೊಂದು ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದ್ದು, ಇಲ್ಲಿನ ಪ್ರಾಂತೀಯ ತೆರಿಗೆ ವ್ಯವಸ್ಥೆ ಕುರಿತು ಅಧ್ಯಯನ ನಡೆಸುತ್ತಿದೆ.

`ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ಸುಧಾರಣೆ ತರಲು ನಿರ್ಧರಿಸಿದ್ದು, ಈ ಬಗ್ಗೆ ವ್ಯಾಪಕ ಅಧ್ಯಯನ ನಡೆಸಲು ಪ್ರವಾಸ ಕೈಗೊಳ್ಳಲಾಗುತ್ತಿದೆ' ಎಂದು ನಿಯೋಗದ ನೇತೃತ್ವ ವಹಿಸಿರುವ ಎ.ಆರ್.ರಾಠೋಡ್ ಶನಿವಾರ ಇಲ್ಲಿ ತಿಳಿಸಿದರು.

ರಾಜ್ಯ ಮಟ್ಟದ ತೆರಿಗೆ ಪದ್ಧತಿ ಅಳವಡಿಸುವ ಕುರಿತು ಹಣಕಾಸು ಸಚಿವರ ಉನ್ನತ ಸಮಿತಿಯು ಅಧ್ಯಯನ ನಡೆಸಿ, ಶಿಫಾರಸು ಮಾಡಲಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಕ್ವಾಜುಲು- ನತಲ್ ಪ್ರಾಂತ್ಯಕ್ಕೆ ಭೇಟಿ ನೀಡಿದ್ದಾಗಿ ರಾಠೋಡ್ ತಿಳಿಸಿದರು.

`ದಕ್ಷಿಣ ಆಫ್ರಿಕಾದ ಹಣಕಾಸು ಸಚಿವ ಪ್ರವೀಣ್ ಗೋರ್ಧನ್ ಹಾಗೂ ಅವರ ಹಿರಿಯ ವ್ಯವಸ್ಥಾಪನಾ ತಂಡದ ಸದಸ್ಯರ ಜತೆ ಇಲ್ಲಿನ ತೆರಿಗೆ ಪ್ರಕ್ರಿಯೆ ಕುರಿತು ಸಂವಾದ ನಡೆಸಿದ್ದೇವೆ' ಎಂದು ರಾಠೋಡ್ ಹೇಳಿದರು.

ದಕ್ಷಿಣ ಆಫ್ರಿಕಾದಲ್ಲಿ ಇದ್ದ ಸಮಯದಲ್ಲಿ ಮಹಾತ್ಮಾ ಗಾಂಧಿ ಅವರು ತಮ್ಮ ವಕೀಲಿ ವೃತ್ತಿಯನ್ನು  ಕ್ವಾಜುಲು- ನತಲ್ ಪ್ರಾಂತ್ಯದಲ್ಲಿ ನಡೆಸಿದ್ದರು. ಹೀಗಾಗಿ ಭಾರತದ ಜತೆ ಈ ಪ್ರಾಂತ್ಯ ಭಾವನಾತ್ಮಕ ನಂಟು ಹೊಂದಿದೆ. ದಕ್ಷಿಣ ಆಫ್ರಿಕಾದಲ್ಲಿವಾಸಿಸುತ್ತಿರುವ ಭಾರತೀಯರ ಪೈಕಿ ಶೇ 70ರಷ್ಟು ಜನರು ಈ ಪ್ರಾಂತ್ಯದಲ್ಲೇ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.