ADVERTISEMENT

ದಕ್ಷಿಣ ಸುಡಾನ್‌: ಇಬ್ಬರು ಭಾರತೀಯ ಯೋಧರ ಹತ್ಯೆ

ವಿಶ್ವಸಂಸ್ಥೆ ಶಾಂತಿಪಾಲನಾ ಪಡೆ ಮೇಲೆ ಬಂಡುಕೋರರ ದಾಳಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ವಿಶ್ವಸಂಸ್ಥೆ (ಪಿಟಿಐ): ಗಲಭೆಪೀಡಿತ ದಕ್ಷಿಣ ಸುಡಾನ್‌ನ ವಿಶ್ವ­ಸಂಸ್ಥೆ ಶಾಂತಿ­ಪಾಲನಾ ಪಡೆ ನೆಲೆ ಮೇಲೆ ಸುಮಾರು ಎರಡು ಸಾವಿರ ಬಂಡು ಕೋರರು ದಾಳಿ ನಡೆಸಿ, ಇಬ್ಬರು ಭಾರ­ತೀಯ  ಯೋಧ­ರನ್ನು ಹತ್ಯೆ ಮಾಡಿದ್ದಾರೆ. ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ.

ಮೃತಪಟ್ಟ ಯೋಧರನ್ನು ಹರಿಯಾಣದವರಾದ ಕೆ.ಪಿ. ಸಿಂಗ್‌ (ಸೇನಾ ವೈದ್ಯಕೀಯ ಪಡೆ) ಹಾಗೂ ಧರ್ಮೇಶ್‌ ಸಂಗ್ವಾನ್‌ (2 ರತಪೂತ ರೈಫಲ್ಸ್‌) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಯೋಧ ಪಶ್ಚಿಮ ಬಂಗಾಳದವರು.

ಜಾಂಗ್ಲಿ ರಾಜ್ಯದ ಅಕೊಬೊ ಕೌಂಟಿ ಪ್ರದೇಶ ದಲ್ಲಿ ಗುರುವಾರ ಬೆಳಿಗ್ಗೆ ಈ ಆಕ್ರ­­ಮಣ ನಡೆ­ದಿದೆ. ಶಾಂತಿಪಾಲನಾ ಪಡೆಯ ವಶ­ದಲ್ಲಿದ್ದ ಸುಮಾರು 30 ಸುಡಾನ್‌ ಜನ­ರನ್ನು ಬಿಡುಗಡೆ ಮಾಡು­ವಂತೆ ಲೌ ನ್ಯೂರ್‌ ಜನಾಂಗದ ಯುವ­ಕರು ಆಗ್ರಹಿ­ಸಿದ್ದು, ಇದಕ್ಕೆ ಭಾರತೀಯ ಯೋಧರು ನಿರಾ­ಕರಿಸಿದಾಗ, ಅವರ ಮೇಲೆ ಗುಂಡಿನ ಸುರಿ­­ಮಳೆಗರೆದಿದ್ದಾರೆ.

ದಾಳಿಯ ಸಂದರ್ಭದಲ್ಲಿ 43 ಭಾರ­ತೀಯ ಯೋಧರು, ವಿಶ್ವ­ಸಂಸ್ಥೆಯ ಆರು ರಾಜ­ಕೀಯ ಅಧಿಕಾರಿ­ಗಳು ಹಾಗೂ 12 ನಾಗ­ರಿಕ ಸಿಬ್ಬಂದಿ ಇದ್ದರು. ಉಳಿದವ­ರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ನಡೆದ ಸ್ಥಳಕ್ಕೆ ಹೆಚ್ಚಿನ ಯೋಧರನ್ನು ಕಳುಹಿಸಲಾಗಿದೆ ಎಂದೂ ಮೂಲಗಳು ಹೇಳಿವೆ.

ದಾಳಿಯನ್ನು ‘ದುರದೃಷ್ಟಕರ’ ಎಂದು ವಿಶ್ವಸಂಸ್ಥೆ­ಯಲ್ಲಿನ ಭಾರ­ತೀಯ ರಾಯ­ಭಾರಿ ಅಶೋಕ್‌ ಮುಖರ್ಜಿ ಖಂಡಿಸಿ­ದ್ದಾರೆ. ದಕ್ಷಿಣ ಸುಡಾನ್‌ನ ರಾಷ್ಟ್ರೀಯ ಸೇನೆಯಾದ ಸುಡಾನ್‌ ಜನತಾ ವಿಮೋ­ಚನಾ ಸೇನೆಯು ವಿಶ್ವಸಂಸ್ಥೆ ಸಿಬ್ಬಂದಿ­ಯನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿ­ಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಒದಗಿ­ಸಿದೆ ಎಂದು ಅವರು ಹೇಳಿದ್ದಾರೆ.

ಈ ದಾಳಿ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನಿಖೆ ನಡೆಸಿ, ಆಕ್ರಮಣ­ಕಾರ­ರನ್ನು ಶಿಕ್ಷಿಸಬೇಕು ಎಂದು ಅವರು ಒತ್ತಾ­ಯಿಸಿದ್ದಾರೆ. ಶಾಂತಿಪಾಲನಾ ಪಡೆ ಯೋಧರನ್ನು ಸ್ಥಳೀಯ ನಾಗರಿಕರ ರಕ್ಷಣೆಗಾಗಿ ನಿಯೋ­ಜಿಸಿದ್ದು, ಆದರೆ ಅವರು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡು ತ್ತಿದ್ದಾರೆ. ಇವರೆಲ್ಲರಿಗೂ ರಕ್ಷಣೆ ನೀಡುವುದು ವಿಶ್ವಸಂಸ್ಥೆ ಕರ್ತವ್ಯ ಎಂದು ಅವರು ನುಡಿದಿದ್ದಾರೆ.

ದಾಳಿಯನ್ನು ಖಂಡಿಸಿರುವ ವಿಶ್ವ­ಸಂಸ್ಥೆ ಮಹಾ ಪ್ರಧಾನ ಕಾರ್ಯ­ದರ್ಶಿ ಬಾನ್‌ ಕೀ ಮೂನ್‌, ಆಕ್ರಮಣ ನಡೆಸಿದವರನ್ನು ಮಾಡಿದ ಅಪರಾಧಕ್ಕೆ ಹೊಣೆಯಾಗಿಸಬೇಕಾಗಿದೆ ಎಂದಿದ್ದಾರೆ.

ಜಗತ್ತಿನ ನೂತನ ರಾಷ್ಟ್ರ­ವಾದ ದಕ್ಷಿಣ ಸುಡಾನ್‌ನಲ್ಲಿ ಕಳೆದ ಎಂಟು ತಿಂಗಳ ಅವಧಿ­ಯಲ್ಲಿ ನಡೆದ ಎರಡನೇ ಘಟನೆ ಇದಾ­ಗಿದೆ. ಕಳೆದ ಏಪ್ರಿಲ್‌ನಲ್ಲಿ ನಡೆದ ವಿಶ್ವ­ಸಂಸ್ಥೆ ಶಾಂತಿಪಾಲನಾ ಪಡೆ ಮೇಲಿನ ದಾಳಿಯಲ್ಲಿ ಐವರು ಯೋಧರು ಹತ್ಯೆಯಾಗಿದ್ದರು.

ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗೆ ಭಾರತವೇ ಹೆಚ್ಚಿನ ಯೋಧರನ್ನು ಒದ­ಗಿಸಿದೆ. ವಿವಿಧ ಶಾಂತಿಪಾಲನಾ ತಂಡ­ಗಳಲ್ಲಿ ಸುಮಾರು 1 ಲಕ್ಷದ 50 ಸಾವಿರ­ದಷ್ಟು ಭಾರತೀಯ ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ.

ಒಬಾಮ ಎಚ್ಚರಿಕೆ:   ದಕ್ಷಿಣ ಸುಡಾನಿನ ವಿವಿಧ ಪ್ರದೇಶಗಳಿಗೆ ಹಿಂಸಾಚಾರ ಹರಡುತ್ತಿರುವಂತೆಯೇ ವಾಷಿಂಗ್ಟನ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ, ದಕ್ಷಿಣ ಸುಡಾನ್‌ ‘ಆಂತರಿಕ ಯುದ್ಧದತ್ತ’ ಸಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.