ADVERTISEMENT

ದಲೈಲಾಮಾಗೆ ಆತಿಥ್ಯ ವಹಿಸುವುದು ‘ಪ್ರಮುಖ ಅಪರಾಧ’: ವಿಶ್ವ ನಾಯಕರಿಗೆ ಚೀನಾ ಎಚ್ಚರಿಕೆ

ಏಜೆನ್ಸೀಸ್
Published 21 ಅಕ್ಟೋಬರ್ 2017, 10:11 IST
Last Updated 21 ಅಕ್ಟೋಬರ್ 2017, 10:11 IST
ದಲೈಲಾಮಾಗೆ ಆತಿಥ್ಯ ವಹಿಸುವುದು ‘ಪ್ರಮುಖ ಅಪರಾಧ’: ವಿಶ್ವ ನಾಯಕರಿಗೆ ಚೀನಾ ಎಚ್ಚರಿಕೆ
ದಲೈಲಾಮಾಗೆ ಆತಿಥ್ಯ ವಹಿಸುವುದು ‘ಪ್ರಮುಖ ಅಪರಾಧ’: ವಿಶ್ವ ನಾಯಕರಿಗೆ ಚೀನಾ ಎಚ್ಚರಿಕೆ   

ಬೀಜಿಂಗ್‌: ಟಿಬೆಟ್‌ಅನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಟಿಬೆಟಿಯನ್ನರ ಆಧ್ಯಾತ್ಮಿಕ ನಾಯಕ ದಲೈಲಾಮಾ ಅವರರಿಗೆ ವಿದೇಶಿ ನಾಯಕರು ಆತಿಥ್ಯ ವಹಿಸುವುದು ಅಥವಾ ಭೇಟಿಯಾಗುವುದನ್ನು, ಪ್ರಮುಖ ಅಪರಾಧ ಎಂದು ಪರಿಗಣಿಸಲಾಗುವುದು ಎಂದು ಚೀನಾ ಎಚ್ಚರಿಕೆ ನೀಡಿದೆ.

‘ಗಡಿಪಾರಾಗಿರುವ ನಾಯಕನನ್ನು ಭೇಟಿ ಮಾಡದೆ ಇರಬಹುದು ಎನ್ನುವ ಕುರಿತು ವಿದೇಶಿ ನಾಯಕರು ಯೋಚಿಸುತ್ತಿಲ್ಲ. ವೈಯಕ್ತಿಕ ಸಾಮರ್ಥ್ಯದ ಆಧಾರದಲ್ಲಿ ಲಾಮಾ ಭೇಟಿ ಮಾಡುತ್ತಿರುವ ಅವರು ತಮ್ಮ ಸರ್ಕಾರಗಳ ಪ್ರತಿನಿಧಿಗಳಾಗಿ ಈ ಕಾರ್ಯ ಮಾಡುತ್ತಿದ್ದಾರೆ’ ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಚೀನಾದ ಆಳ್ವಿಕೆಯ ವಿರುದ್ಧ ಬಂಡಾಯವೆದ್ದು, ವಿಫಲವಾಗಿ 1959ರಲ್ಲಿ ಭಾರತಕ್ಕೆ ಓಡಿ ಹೋಗಿರುವ ದೇಶಭ್ರಷ್ಟ ದಲೈಲಾಮಾರನ್ನು ಅಪಾಯಕಾರಿ ಪ್ರತ್ಯೇಕತಾವಾದಿ ಎಂದು ಚೀನಾ ಪರಿಗಣಿಸಿದೆ. ಆದರೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಧರ್ಮಗುರು ದಲೈಲಾಮಾ ತನ್ನ ‘ಮಾತೃಭೂಮಿ’ಗೆ ನಿಜವಾದ ಸ್ವಾಯತ್ತತೆಯನ್ನು ಬಯಸುವುದಾಗಿ ಹೇಳಿಕೊಂಡಿದ್ದಾರೆ.

ADVERTISEMENT

‘ಯಾವುದೇ ದೇಶ ಅಥವಾ ಸಂಸ್ಥೆಯ ಯಾವೊಬ್ಬ ವ್ಯಕ್ತಿ ಚೀನಾ ಜನರ ಭಾವನೆಗಳಿಗೆ ವಿರುದ್ಧವಾಗಿ ದಲೈಲಾಮಾ ಭೇಟಿ ಮಾಡುವುದಕ್ಕೆ ಒಪ್ಪುವುದನ್ನು ಪ್ರಮುಖ ಅಪರಾಧ ಎಂದು ಭಾವಿಸಲಾಗುತ್ತದೆ’ ಎಂದು ಆಡಳಿತಾರೂಢ ಚೀನಾ ಕಮ್ಯುನಿಸ್ಟ್‌ ಪಕ್ಷದ ಯುನೈಟೆಡ್ ಫ್ರಂಟ್ ವರ್ಕ್ ಇಲಾಖೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಾಂಗ್ ಯಿಜಿಂಗ್‌ ಹೇಳಿದ್ದಾರೆ.

ವಿಶ್ವದ ನಾಯಕರು ದಲೈಲಾಮಾ ಭೇಟಿ ಮಾಡುವುದನ್ನು ಚೀನಾ ಪ್ರತಿಬಾರಿಯಂತೆ ಪ್ರತಿಭಟಿಸುತ್ತದೆ. ಜತೆಗೆ ಬೀಜಿಂಗ್‌ ಜತೆ ರಾಜತಾಂತ್ರಿಕ ಸಂಬಂಧವನ್ನು ಹೊಂದಲು ಎಲ್ಲಾ ವಿದೇಶಿ ಸರ್ಕಾರಗಳು ಕಡ್ಡಾಯವಾಗಿ ಟಿಬೆಟ್‌ಅನ್ನು ಚೀನಾದ ಒಂದು ಭಾಗವಾಗಿಯೇ ಗುರುತಿಸಬೇಕು ಎಂದು ತಿಳಿಸಿದ್ದಾರೆ.

ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಹಲವು ಪ್ರದೇಶಗಳಿಗೆ ಭೇಟಿ ನೀಡಲು ದಲೈಲಾಮಾ ಅವರಿಗೆ ಭಾರತ ಈ ವರ್ಷ ಅವಕಾಶ ಕಲ್ಪಿಸಿತ್ತು. ಇದಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.