ಇಸ್ಲಾಮಾಬಾದ್ (ಐಎಎನ್‌ಎಸ್): ಇಲ್ಲಿಯ ನ್ಯಾಯಾಲಯದಲ್ಲಿ ಸೋಮವಾರ ನಡೆದ ಆತ್ಮಹತ್ಯಾ ದಾಳಿಗೂ ಮುನ್ನವೇ 42 ಬೆದರಿಕೆ ಸಂದೇಶ ಹಾಗೂ ದಾಳಿ ಕುರಿತು 22ಕ್ಕೂ ಹೆಚ್ಚು ಮುನ್ಸೂಚನೆ ಲಭ್ಯವಾಗಿದ್ದವು ಎಂದು ಪಾಕಿಸ್ತಾನದ ಒಳಾಡಳಿತ ಕಾರ್ಯದರ್ಶಿ ಶಾಯಿದ್ ಖಾನ್ ಹೇಳಿದ್ದಾರೆ.
ಆಡಳಿತ ವರ್ಗ ಹಾಗೂ ಪೊಲೀಸರಿಗೆ ಭಯೋತ್ಪಾದನಾ ದಾಳಿಯ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂದು ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಒಳಾಡಳಿತ ಕಾರ್ಯದರ್ಶಿ ನ್ಯಾಯಾಲಯಕ್ಕೆ ಹೇಳಿದ್ದಾರೆ.ಪಾಕ್ ಜಿಲ್ಲಾ ನ್ಯಾಯಾಲಯದ ಮೇಲೆ ನಡೆದ ದಾಳಿಯಲ್ಲಿ ಒಬ್ಬರು ನ್ಯಾಯಾಧೀಶರು ಸೇರಿದಂತೆ 10 ವಕೀಲರು ಸಾವನ್ನಪ್ಪಿದ್ದು, ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಕೋರ್ಟ್ ಆವರಣದಲ್ಲಿದ್ದ ನಾಲ್ಕು ಸಿಸಿಟಿವಿ ಕೆಲಸ ಮಾಡುತ್ತಿರಲಿಲ್ಲ ಎಂದು ಒಳಾಡಳಿತ ಸಚಿವಾಲಯ ಹೇಳಿದೆ.
ಸ್ಥಳ ಬದಲಿಗೆ ಮನವಿ
ದೇಶದ್ರೋಹ ಆಪಾದನೆ ವಿಚಾರಣೆ ಎದುರಿಸುತ್ತಿರುವ ಮಾಜಿ ಸೇನಾ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರ ವಿಚಾರಣೆ ಸ್ಥಳವನ್ನು ಬದಲಾಯಿಸಬೇಕು ಎಂದು ಅವರ ಪರ ವಕೀಲರು ಬುಧವಾರ ಕೋರಿದ್ದಾರೆ.
ಪಾಕಿಸ್ತಾನಿ ತಾಲಿಬಾನಿಗಳು ತಲೆ ಕಡಿಯುವ ಬೆದರಿಕೆ ಒಡ್ಡಿದ ಕಾರಣ ವಿಚಾರಣೆ ಸ್ಥಳ ಬದಲಿಗೆ ಬೇಡಿಕೆ ಇಟ್ಟಿರುವ ವಕೀಲರು, ತೆಹ್ರಿಕ್–ಎ –ತಾಲಿಬಾನ್ ಕಳಿಸಿದ ಬೆದರಿಕೆ ಪತ್ರವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಚಾರಣೆ ನಡೆಯುತ್ತಿರುವ ನ್ಯಾಷನಲ್ ಲೈಬ್ರರಿ ಸ್ಥಳದಲ್ಲಿ ಸೋಮವಾರ ನಡೆದ ದಾಳಿಯಲ್ಲಿ 11 ಜನ ಮೃತಪಟ್ಟ ಕಾರಣ ಸುರಕ್ಷಿತ ಸ್ಥಳಕ್ಕೆ ವಿಚಾರಣೆ ಬದಲಾಯಿಸಬೇಕೆಂದು ವಕೀಲರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.