ADVERTISEMENT

ದುಬೈನಿಂದ ಪಾಕ್ ಗೆ ಹಿಂದಿರುಗಿದ ಜರ್ದಾರಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 6:25 IST
Last Updated 13 ಜನವರಿ 2012, 6:25 IST
ದುಬೈನಿಂದ ಪಾಕ್ ಗೆ ಹಿಂದಿರುಗಿದ ಜರ್ದಾರಿ
ದುಬೈನಿಂದ ಪಾಕ್ ಗೆ ಹಿಂದಿರುಗಿದ ಜರ್ದಾರಿ   

 ಇಸ್ಲಾಮಾಬಾದ್ (ಐಎಎನ್ಎಸ್): ಪಾಕಿಸ್ತಾನದಲ್ಲಿ ಸೇನೆ ಮತ್ತು ಸರ್ಕಾರದ ನಡುವೆ ಮುಸುಕಿನ ಗುದ್ದಾಟದ ವದಂತಿಗಳು ಹರಡಿದ್ದ ಸಮಯದಲ್ಲಿಯೇ ಗುರುವಾರ ದುಬೈಗೆ ತೆರಳಿದ್ದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರು ಶುಕ್ರವಾರ ನಸುಕಿನಲ್ಲಿ  ಪಾಕಿಸ್ತಾನಕ್ಕೆ ಹಿಂದಿರುಗಿದ್ದಾರೆ.

ಪಾಕಿಸ್ತಾನದಲ್ಲಿ ಇನ್ನೇನು ಸೇನಾ ಕ್ಷಿಪ್ರ ಕ್ರಾಂತಿ ನಡೆಯಲಿದೆ ಎಂಬ  ದಟ್ಟ ವದಂತಿಗಳು ಹಬ್ಬಿದ್ದ ಸಂದರ್ಭದಲ್ಲೇ ಅಧ್ಯಕ್ಷ ಜರ್ದಾರಿ ಅವರು ಗುರುವಾರ ದುಬೈಗೆ ತೆರಳಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು.

ದುಬೈ ಭೇಟಿಯನ್ನು ಮೊಟಕುಗೊಳಿಸಿದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಅವರು, ಶುಕ್ರವಾರ ಮನೆಗೆ ಹಿಂತಿರುಗಿದ್ದಾರೆಂದು ಜಿಯೋ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ತಮ್ಮ ಖಾಸಗಿ ವ್ಯವಹಾರಗಳನ್ನು ಮುಗಿಸಿಕೊಂಡು ಅಧ್ಯಕ್ಷ ಜರ್ದಾರಿ ಅವರು  ಶುಕ್ರವಾರ ಬೆಳಿಗ್ಗೆಯೇ ಪಾಕಿಸ್ತಾನಕ್ಕೆ ಹಿಂದಿರುಗಿದ್ದಾರೆ ಎಂದು ಅಧ್ಯಕ್ಷರ ವಕ್ತಾರ ಫರ್ತುಲ್ಲಾ ಬಾಬರ್ ಅವರು ತಿಳಿಸಿದ್ದಾರೆ.

ಕಳೆದ ವರ್ಷ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಹತ್ಯೆಯಾದ ನಂತರ ಅಧ್ಯಕ್ಷ ಜರ್ದಾರಿ ಅವರು ದೇಶದ ಮೇಲೆ ಸೇನೆ ಹಿಡಿತ ಸಾಧಿಸಬಹುದು ಎಂದು ಶಂಕೆ ವ್ಯಕ್ತಪಡಿಸಿ ಅಮೆರಿಕೆಗೆ ಮಾಹಿತಿ ರವಾನೆ ಮಾಡಿದ್ದಾರೆಂಬ ಮಾಹಿತಿಯನ್ನು ಸೇನೆ ಮತ್ತು ಐಎಸ್ಐ ಮುಖ್ಯಸ್ಥ ಶುಜಾ ಪಾಷಾ ಸರ್ಕಾರದ ಒಪ್ಪಿಗೆ ಇಲ್ಲದೇ ಸುಪ್ರೀಂ ಕೋರ್ಟಿಗೆ ನೀಡಿದ್ದಾರೆ ಎಂದು ಪ್ರಧಾನಿ ಗಿಲಾನಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರಧಾನಿ ಹೇಳಿಕೆಗೆ ಪಾಕಿಸ್ತಾನದ ಸೇನಾ ವಲಯದಲ್ಲಿ, ~ ಇದರ ಪರಿಣಾಮ ಸರಿಯಿರುವುದಿಲ್ಲ. ದೇಶದ ಮೇಲೆ ದುಷ್ಪರಿಣಾಮ ಉಂಟಾಗಬಹುದು~ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಅಧ್ಯಕ್ಷ ಜರ್ದಾರಿ ಆರೋಗ್ಯ ಕುರಿತಂತೆ ಗೊಂದಲಕಾರಿ ವದಂತಿಗಳಿವೆ. ಕಳೆದ ಡಿ 6 ರಂದು ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗಾಗಿ ಜರ್ದಾರಿ ವಿದೇಶಕ್ಕೆ ತೆರಳಿದ್ದರು. ಪಾಕಿಸ್ತಾನದ ಸೇನಾ ವೈದ್ಯರು ಅಧ್ಯಕ್ಷ ಜರ್ದಾರಿ ಆರೋಗ್ಯವಾಗಿದ್ದಾರೆ ಎಂದರೆ ಅಮೆರಿಕದ ಪತ್ರಿಕೆಯೊಂದು ಅವರಿಗೆ ಲಘ ಹೃದಯಾಘಾತವಾಗಿದೆ ಎಂದು ವರದಿ ಮಾಡಿತ್ತು. ಇದಾದ ನಂತರ ಜರ್ದಾರಿ ಅವರು ಪಾರ್ಶ್ವವಾಯು ಪೀಡಿತರಾಗಿದ್ದಾರೆ, ಮಿದುಳಿನಲ್ಲಿ ರಕ್ತಸ್ರಾವವಾಗಿದೆ ಎಂದೂ ವರದಿಯಾಗಿತ್ತು. ಕಳೆದ ತಿಂಗಳು ಅಧ್ಯಕ್ಷ ಜರ್ದಾರಿ ದುಬೈನಲ್ಲಿ ಹೃದಯ ರೋಗಕ್ಕೆ ಚಿಕಿತ್ಸೆ ಪಡೆದಿದ್ದರು.

ಪಾಕಿಸ್ತಾನದಲ್ಲಿನ ಆಸ್ಪತ್ರೆಗಳಲ್ಲಿ ಅಧ್ಯಕ್ಷ ಜರ್ದಾರಿ ಅವರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ಪ್ರಧಾನಿ ಗಿಲಾನಿ ಅವರು ಈಚೆಗೆ ಸೆನೆಟ್ ಗೆ ತಿಳಿಸಿದ್ದು ಉಹಾಪೋಹಗಳಿಗೆ ಕಾರಣವಾಗಿತ್ತು. ಗಿಲಾನಿ ಅವರು ಸೇನೆಯ ಅಧಿಕಾರಿಯೊಬ್ಬರನ್ನು ವಜಾ ಮಾಡಲು ಮುಂದಾಗಿದ್ದ ಸಂದರ್ಭದಲ್ಲೇ ಜರ್ದಾರಿ ದುಬೈಗೆ ತೆರಳಿದ್ದು ಹಲವಾರು ಶಂಕೆಗಳಿಗೆ ಇಂಬು ನೀಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.