ADVERTISEMENT

‘ದೋಕಲಾ’ದಿಂದ ಪಾಠ ಕಲಿಯಿರಿ

ಭಾರತದ ರಾಯಭಾರಿ ಬಂಬಾವಾಲೆ ಹೇಳಿಕೆಗೆ ಚೀನಾ ತಿರುಗೇಟು

ಪಿಟಿಐ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಬೀಜಿಂಗ್: ಕಳೆದ ವರ್ಷದ ದೋಕಲಾ ಬಿಕ್ಕಟ್ಟಿನಿಂದ ಭಾರತ ಪಾಠ ಕಲಿಯಬೇಕಿದೆ ಎಂದಿರುವ ಚೀನಾ, ದೋಕಲಾ ಪ್ರದೇಶ ತನಗೆ ಸೇರಿದ್ದು ಎಂದು ಸೋಮವಾರ ಮತ್ತೆ ಪ್ರತಿಪಾದಿಸಿದೆ.

ದೋಕಲಾದಲ್ಲಿ ಯಥಾಸ್ಥಿತಿ ಬದಲಿಸಲು ಚೀನಾ ಯತ್ನಿಸಿದ್ದೇ ಬಿಕ್ಕಟ್ಟು ಉಂಟಾಗಲು ಕಾರಣ ಎಂದು ಚೀನಾದಲ್ಲಿರುವ ಭಾರತದ ರಾಯಭಾರಿ ಗೌತಮ್ ಬಂಬಾವಾಲೆ ಅವರು ನೀಡಿದ್ದ ಹೇಳಿಕೆಗೆ ಚೀನಾ ತಿರುಗೇಟು ನೀಡಿದೆ.

‘ದೋಕಲಾದಲ್ಲಿ ಚಟುವಟಿಕೆಗಳನ್ನು ಕೈಗೊಳ್ಳುವುದು ನಮ್ಮ ಸಾರ್ವಭೌಮ ಹಕ್ಕು. ಹೀಗಿರುವಾಗ ಯಥಾಸ್ಥಿತಿ ಬದಲಿಸುವ ಮಾತು ಉದ್ಭವಿಸುವುದಿಲ್ಲ’ ಎಂದು ವಿದೇಶಾಂಗ ಇಲಾಖೆ ವಕ್ತಾರೆ ಹು ಚುಂಗ್‌ಯಿಂಗ್ ಹೇಳಿದ್ದಾರೆ.

ADVERTISEMENT

‘ಕಳೆದ ವರ್ಷ ನಮ್ಮ ಮುಂದಾಲೋಚನೆ ಹಾಗೂ ಸಂಘಟಿತ ಯತ್ನದಿಂದ ಬಿಕ್ಕಟ್ಟು ನಿವಾರಣೆಯಾಯಿತು. ಭಾರತ ಇದರಿಂದ ಕೆಲವು ಪಾಠಗಳನ್ನು ಕಲಿಯುವ ಅಗತ್ಯವಿದೆ. ದ್ವಿಪಕ್ಷೀಯ ಒಪ್ಪಂದದಂತೆ ಗಡಿ ಪ್ರದೇಶಗಳಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಭಾರತ ಸೂಕ್ತ ವಾತಾವರಣ ನಿರ್ಮಿಸಬೇಕಿದೆ’ ಎಂದು ಅವರು ಸಲಹೆ ನೀಡಿದ್ದಾರೆ.

ಭಾರತ–ಚೀನಾ ಗಡಿಯಲ್ಲಿ ಯಥಾಸ್ಥಿತಿ ಬದಲಿಸುವ ಯಾವುದೇ ಯತ್ನಗಳು ನಡೆದರೂ ಅದು ಮತ್ತೊಂದು ದೋಕಲಾ ಬಿಕ್ಕಟ್ಟಿಗೆ ದಾರಿ ಮಾಡಿಕೊಡುತ್ತದೆ ಎಂದು ಬಂಬಾವಾಲೆ ಎಚ್ಚರಿಸಿದ್ದರು.

ಅನಿರೀಕ್ಷಿತ ಪರಿಸ್ಥಿತಿ ಎದುರಿಸಲು ಸನ್ನದ್ಧ
ಡೆಹ್ರಾಡೂನ್‌:
ದೋಕಲಾ ವಿಷಯದಲ್ಲಿ ಭಾರತ ಎಚ್ಚರಿಕೆಯಿಂದ ಇದ್ದು, ಅನಿರೀಕ್ಷಿತವಾದ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್‌ ಹೇಳಿದರು.

ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಮೊದಲ ಬಾರಿಗೆ ಉತ್ತರಾಖಂಡಕ್ಕೆ ಬಂದಿದ್ದ ಅವರು, ಸೇನಾ ಪಡೆಗಳ ಆಧುನೀಕರಣಕ್ಕೆ ಸರ್ಕಾರ ಮುಂದಾಗಿದೆ ಎಂದರು.

ದೋಕಲಾದ ವಿವಾದಿತ ಪ್ರದೇಶದಲ್ಲಿ ನಿರ್ಮಿಸುತ್ತಿದ್ದ ಕಟ್ಟಡ ಹಾಗೂ ರಸ್ತೆ ಕಾಮಗಾರಿಗಳನ್ನು ಭಾರತ ನಿಲ್ಲಿಸಿದ ಬಳಿಕ 73 ದಿನಗಳ ಕಾಲ ಜಮಾವಣೆಗೊಂಡಿದ್ದ ಉಭಯ ರಾಷ್ಟ್ರಗಳ ಯೋಧರನ್ನು ವಾಪಸ್‌ ಕರೆಸಿಕೊಳ್ಳಲಾಗಿತ್ತು. ಈ ಮೂಲಕ ಅಲ್ಲಿ ನೆಲೆಸಿದ್ದ ಆತಂಕದ ಪರಿಸ್ಥಿತಿ ಆಗಸ್ಟ್‌ 28ಕ್ಕೆ ಕೊನೆಗೊಂಡಿತ್ತು.

ಉತ್ತರಾಖಂಡ ದೇವಭೂಮಿ ಅಷ್ಟೆ ಅಲ್ಲ. ಯೋಧರ ನಾಡು, ದೇಶದ ಭದ್ರತೆಗೆ ಇಲ್ಲಿನ ಕೊಡುಗೆ ಅನನ್ಯವಾದುದು ಎಂದು ಶ್ಲಾಘಿಸಿದರು.

‘ಮಾತುಕತೆ ಮೂಲಕ ಇತ್ಯರ್ಥ’
3488 ಕಿ.ಮೀ ಉದ್ದದ ಭಾರತ–ಚೀನಾ ನಡುವಿನ ಗಡಿ ನಿರ್ಧಾರವಾಗಬೇಕು ಎಂದಿದ್ದ ಬಂಬಾವಾಲೆ ಹೇಳಿಕೆಗೆ ಚೀನಾ ಪ್ರತಿಕ್ರಿಯಿಸಿದೆ.

‘ಗಡಿ ನಿರ್ಧಾರ ವಿಚಾರದಲ್ಲಿ ಚೀನಾದ ನಿಲುವು ಸ್ಪಷ್ಟ ಹಾಗೂ ಸ್ಥಿರವಾಗಿದೆ. ಪೂರ್ವ, ಮಧ್ಯ ಹಾಗೂ ಪಶ್ಚಿಮ ಭಾಗದ ಎಲ್ಲೆಗಳನ್ನು ‘ಅಧಿಕೃತ’ವಾಗಿ ಇನ್ನಷ್ಟೇ ನಿರ್ಧರಿಸಬೇಕಿದೆ’ ಎಂದು ಹು ಹೇಳಿದ್ದಾರೆ.

‘ಪ್ರಸ್ತುತ ಗಡಿ ಬಿಕ್ಕಟ್ಟುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಚೀನಾ ಸಿದ್ಧವಿದೆ. ಭೌಗೋಳಿಕ ವ್ಯಾಜ್ಯಗಳನ್ನು ಪರಿಹರಿಸುವ ಮಾರ್ಗಗಳನ್ನು ಹುಡುಕಲು ಉಭಯ ದೇಶಗಳು ಮಾತುಕತೆ ನಡೆಸುವುದು ಅಗತ್ಯ’ ಎಂದಿದ್ದಾರೆ. ಈವರೆಗೆ ಗಡಿ ವಿವಾದ ಕುರಿತಂತೆ  20 ಸಭೆಗಳು ನಡೆದಿವೆ. ಬಾಕಿಯಿರುವ ಅಂತಿಮ ಮಾತುಕತೆವರೆಗೂ ಗಡಿಪ್ರದೇಶದಲ್ಲಿ ಶಾಂತಿ ಕಾಪಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.