ADVERTISEMENT

ದ್ವಿಪೌರತ್ವ: ಸಚಿವರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ಇಸ್ಲಾಮಾಬಾದ್ (ಐಎಎನ್‌ಎಸ್): ಸಿಂಧ್ ಪ್ರಾಂತ್ಯ ಸರ್ಕಾರದ ನಾಲ್ವರು ಸಚಿವರು ಸೇರಿದಂತೆ ಅಸೆಂಬ್ಲಿಯ ಆರು ಶಾಸಕರು ದ್ವಿಪೌರತ್ವ ಪ್ರಕರಣದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಎರಡು ದೇಶದ ಪೌರತ್ವವನ್ನು ಹೊಂದಿಲ್ಲ ಎಂದು ಅಫಿಡವಿಟ್ ಸಲ್ಲಿಸಲು ವಿಫಲರಾದ ಕಾರಣ ಮುತ್ತಹಿದ್ ಖ್ವಯಾಮಿ ಚಳವಳಿಯ (ಎಂಕ್ಯೂಎಂ) ರಜಾ ಹರೂನ್, ಮೊಹಮ್ಮದ್ ಅಲಿ ಷಾ, ಅಸ್ಕರಿ ತಖ್ವಿ, ಅಬ್ದುಲ್ ಮೊಯ್ದ ಸಿದ್ದಿಕಿ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುರದ್ ಅಲಿ ಷಾ, ಸಿದ್ದಿಕಿ ಅಲಿ ಮೆನನ್ ರಾಜೀನಾಮೆ ನೀಡಿದವರು. ಶಾಸನ ಸಭೆಯ ಸಭಾಪತಿಯವರು ರಾಜೀನಾಮೆಯನ್ನು ಸ್ವೀಕರಿಸಿ, ಪಾಕ್ ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾರೆ.

ಹಣಕಾಸು ಸಚಿವ ಮುರದ್ ಅಲಿ ಷಾ , ಮೆಮನ್ ಕ್ರಮವಾಗಿ ತಂತ್ರಜ್ಞಾನ ಶಿಕ್ಷಣ ಹಾಗೂ ಗಣಿಗಾರಿಕೆ ಸಚಿವರು, ಹರೂನ್ ಐಟಿ ಸಚಿವರು, ಮೊಹಮ್ಮದ್ ಅಲಿ ಷಾ ಕ್ರೀಡಾ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ದ್ವಿಪೌರತ್ವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಮತ್ತು ಶಾಸಕರುಗಳಿಗೆ ಅಫಿಡವಿಟ್ ಸಲ್ಲಿಸಲು ನ. 30ರ ವರೆಗೆ ಕಾಲಾವಕಾಶ ನೀಡಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಚುನಾವಣೆ: ಫಾತಿಮಾ ಭುಟ್ಟೊ ಸ್ಪರ್ಧೆ

ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಸೋದರ ಸಂಬಂಧಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಫಾತಿಮಾ ಭುಟ್ಟೊ ಅವರು ಮುಂಬರುವ ಸಂಸತ್ ಚುನಾವಣೆಯಲ್ಲಿ ಪಂಜಾಬ್ ಪ್ರಾಂತ್ಯದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. 30 ವರ್ಷದ ಫಾತಿಮಾ ಅವರು ಬೆನಜೀರ್ ಸಹೋದರ ಮುರ್ತುಝಾ ಭುಟ್ಟೊ ಅವರ ಮಗಳು. ಇವರು ರಹೀಂ ಖಾನ್ ಜಿಲ್ಲೆಯ ಲಿಕ್ವತಪುರ ಕ್ಷೇತ್ರದಿಂದ ಸ್ಪರ್ಧಿಸುವರು ಎಂದು ಪಿಪಿಪಿ-ಎಸ್‌ಬಿ  (ಪಾಕಿಸ್ತಾನ ಪೀಪಲ್ ಪಾರ್ಟಿ ಸಹೀದ್ ಭುಟ್ಟೊ) ಪಕ್ಷದ ವಕ್ತಾರ ಘಿನ್ವಾ ಹೇಳಿದ್ದಾರೆ.

ಉಗ್ರರಿಗೆ ಸ್ಥಳ ತೆರವಿಗೆ ಸೂಚನೆ

ಮಾಸುದ್ ಬುಡಕಟ್ಟು ಜನಾಂಗ ಮತ್ತು ತಾಲಿಬಾನ್ ಪಡೆಯು ಪಾಕಿಸ್ತಾನದ ದಕ್ಷಿಣ ವಜೀರಸ್ತಾನದಲ್ಲಿರುವ ಬುಡಕಟ್ಟು ಪ್ರದೇಶವನ್ನು ಡಿ.5ರೊಳಗೆ ತೊರೆಯಬೇಕು ಅಥವಾ ಕ್ರಮ ಎದುರಿಸಬೇಕು ಎಂದು ಎರಡು ದಿನಗಳ ಹಿಂದೆ ಆತ್ಮಹತ್ಯಾ ದಾಳಿಯಿಂದ ಪಾರಾದ ತಾಲಿಬಾನ್ ಕಮಾಂಡರ್ (ಸರ್ಕಾರಿ ಪರ ಗುಂಪು) ಮುಲ್ಲಾನಾಜೀರ್ ಎಚ್ಚರಿಸಿದ್ದಾನೆ.

ಒಂದು ವೇಳೆ ಜಾಗವನ್ನು ತೆರವುಗೊಳಿಸದಿದ್ದರೆ 10 ಲಕ್ಷ ದಂಡ ವಿಧಿಸಲಾಗುವುದು ಹಾಗೂ ಅಲ್ಲಿರುವ ಮನೆಗಳನ್ನು ನಾಶಪಡಿಸಲಾಗುವುದು ಎಂದು ವಾನ, ಅಝಾಮ್ ವಾರ್ಷಕ್, ಕರಿಕೋರ್ಟ್ ಮತ್ತು ಥೈಖುಲ ಪ್ರದೇಶದಲ್ಲಿ ಧ್ವನಿವರ್ಧಕದ ಮೂಲಕ ಹೇಳಿಕೆ ನೀಡಿದ್ದಾನೆ. 2 ದಿನಗಳ ಹಿಂದೆ ನಡೆದ ಘಟನೆಯಲ್ಲಿ ನಾಜೀರ್ ಗಾಯಗೊಂಡು 7 ಜನ ಮೃತಪಟ್ಟಿದ್ದರು.

ದೇಗುಲ ಕೆಡವದಂತೆ ಹೈಕೋರ್ಟ್ ತಡೆ

ಪಾಕಿಸ್ತಾನದಲ್ಲಿರುವ ಪುರಾತನ ದೇವಾಲಯ ಶ್ರೀ ರಾಮ ಪೀರ್ ಮಂದಿರವನ್ನು ಕೆಡವದಂತೆ ತಡೆ ನೀಡಿರುವ ಸಿಂಧ್ ಹೈಕೋರ್ಟ್, ಅಲ್ಲಿನ  ಸೇನಾಧಿಕಾರಿಗಳಿಗೆ ಮತ್ತು ಕರಾಚಿಯ ಆಡಳಿತಾಧಿಕಾರಿಗಳಿಗೆ ಈ ಸಂಬಂಧ ಶನಿವಾರ ಆದೇಶ ನೀಡಿದೆ.

ರಾಮ್ ಚಾಂದೇರ್ ಎಂಬುವರು ದೇವಸ್ಥಾನವನ್ನು ತೆರವುಗೊಳಿಸದಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಖಾಸಗಿ ಕಟ್ಟಡ ನಿರ್ಮಾಣಕಾರರು ಆಡಳಿತಾಧಿಕಾರಿಗಳ ಜತೆ ಸೇರಿ ದೇವಾಲಯದ ಜಾಗವನ್ನು ಅತಿಕ್ರಮಿಸುವ ದುರುದ್ದೇಶದಿಂದ ದೇವಸ್ಥಾನವನ್ನು ಕೆಡವಲು ಮುಂದಾಗಿದ್ದಾರೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.