ADVERTISEMENT

`ನರಕದ ಬಾಗಿಲು' ಬಿಚ್ಚಿಟ್ಟ ರಹಸ್ಯ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ವಾಷಿಂಗ್ಟನ್(ಪಿಟಿಐ): ಇಟಲಿಯ ಪುರಾತತ್ವಜ್ಞರು ಟರ್ಕಿಯಲ್ಲಿ ಪತ್ತೆಹಚ್ಚಿರುವ `ನರಕದ ಬಾಗಿಲು'ಎಂದೇ ಖ್ಯಾತಿಗೊಂಡಿರುವ `ಪುರಾತನ ಗುಹೆ' ಅವಶೇಷಗಳ ಕುರಿತು ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.

`ಫ್ರೈಜಿಯನ್ ಸಂಸ್ಕೃತಿಯ ಹಿರಾಪೊಲಿಸ್ ನಗರದ (ಇಂದಿನ ಪಮುಕ್ಕಲೆ) ಸಮೀಪ ಪತ್ತೆಯಾದ ಈ ಗುಹೆಯಿಂದ ಅಪಾಯಕಾರಿ ಇಂಗಾಲದ ಹೊಗೆ ಹೊರಸೂಸುತ್ತಿದೆ. ಈ ಗುಹೆಯನ್ನು `ಪ್ಲುಟೋ ಗೇಟ್' ಎಂದೂ ಕರೆಯಲಾಗಿದೆ. ಗ್ರೀಕ್-ರೋಮನ್ ಪುರಾಣ ಮತ್ತು ಸಂಪ್ರದಾಯದ ಪ್ರಕಾರ ಈ ಗುಹೆ ಭೂಗತ ಜಗತ್ತಿಗೆ ತೆರೆದುಕೊಳ್ಳುವ ಬಾಗಿಲು. ಈ ಗುಹೆಯ ತುಂಬ ದಟ್ಟವಾದ ಕೆಟ್ಟ ಹೊಗೆ ತುಂಬಿದ್ದು, ಯಾವುದೇ ಪ್ರಾಣಿ ಒಳಹೊಕ್ಕರೆ ಸಾವು ನಿಶ್ಚಿತ ಎಂದು ಗ್ರೀಕ್‌ನ ಭೂವಿಜ್ಞಾನಿ ಸ್ಟ್ರಾಬೋ, ಕ್ರಿ.ಪೂ.64-63ರಲ್ಲೇ ಬರೆದಿದ್ದರು.
`ಗುಹೆಯೊಳಗೆ ಗುಬ್ಬಚ್ಚಿಗಳನ್ನು ಎಸೆದಾಗ ಅವು ಕ್ಷಣ ಮಾತ್ರದಲ್ಲಿ ಸಾವನ್ನಪ್ಪಿದವು' ಎಂದೂ ಅವರು ಉಲ್ಲೇಖಿಸಿದ್ದರು.

ಈ ಗುಹಾವಶೇಷವನ್ನು ಸಲೆಂಟೋ ವಿ.ವಿ ಪ್ರೊ. ಫ್ರಾನ್ಸಿಸ್ಕೋ ಡಿ'ಆಂಡ್ರಿಯಾ ನೇತೃತ್ವದ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.`ಉತ್ಖನನದ ವೇಳೆ ಗುಹೆಯ ಮಾರಣಾಂತಿಕ ಲಕ್ಷಣಗಳು ಗಮನಕ್ಕೆ ಬಂದಿದ್ದವು. ಗುಹೆಯಿಂದ ಹೊರಬಂದ ಇಂಗಾಲದ ಡೈ ಆಕ್ಸೈಡ್‌ನ ನೊರೆಯಿಂದಾಗಿ ಹಕ್ಕಿಗಳು ಹತ್ತಿರ ಬರುತ್ತಿದ್ದಂತೆಯೇ ಹಲವು ಹಕ್ಕಿಗಳು ಸತ್ತುಹೋದವು ಎಂದು ಡಿ'ಆಂಡ್ರಿಯಾ ಹೇಳಿದರು. ಸಂತಾನೋತ್ಪತ್ತಿ ದೇವತೆ ಎನ್ನಲಾದ ಸೈಬೀಲ್‌ನ ನಪುಂಸಕರು ಮಾತ್ರ ಅಪಾಯವಿಲ್ಲದೇ ಗುಹೆಯೊಳಗೆ ಪ್ರವೇಶಿಸುತ್ತಿದ್ದರು ಎಂದು ಸ್ಟ್ರಾಬೊ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.