ADVERTISEMENT

ನಾಸಾದಿಂದ ಮಂಗಳ ಗ್ರಹಕ್ಕೆ ‘ಕ್ಯೂಬ್‌ಸ್ಯಾಟ್ಸ್‌’

ಸೌರಮಂಡಲ ಪ್ರವೇಶಿಸಿದ ಉಪಗ್ರಹಗಳು

ಪಿಟಿಐ
Published 6 ಮೇ 2018, 19:30 IST
Last Updated 6 ಮೇ 2018, 19:30 IST
ಕ್ಯೂಬ್‌ ಒನ್‌ ಉಪಗ್ರಹ
ಕ್ಯೂಬ್‌ ಒನ್‌ ಉಪಗ್ರಹ   

ವಾಷಿಂಗ್ಟನ್ : ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ ಮಂಗಳಗ್ರಹದ ಕಂಪನಗಳ ಅಧ್ಯಯನಕ್ಕೆ ಶನಿವಾರ ಉಡಾವಣೆ ಮಾಡಿರುವ ‘ಇನ್‌ಸೈಟ್’ ಗಗನನೌಕೆ ಜತೆಗೆ ‘ಕ್ಯೂಬ್‌ಸ್ಯಾಟ್ಸ್‌’ ಹೆಸರಿನ ಸಣ್ಣಗಾತ್ರದ ಎರಡು ಉಪಗ್ರಹಗಳನ್ನೂ ಉಡಾವಣೆ ಮಾಡಿದೆ.

ಈ ಉಪಗ್ರಹಗಳು ಸೌರಮಂಡಲ ಪ್ರವೇಶಿಸಿದ್ದು, ಸಮರ್ಥವಾಗಿವೆ ಎಂಬ ಕುರಿತು ‘ನಾಸಾ’ ರೇಡಿಯೊ ಸಂದೇಶ ಸ್ವೀಕರಿಸಿದೆ. ಕ್ಯಾಲಿಫೋರ್ನಿಯಾದ ವ್ಯಾಂಡೆನ್‌ಬರ್ಗ್‌ ವಾಯುನೆಲೆಯಿಂದ ಇನ್‌ಸೈಟ್‌ ಗಗನನೌಕೆ ಜತೆಗೆ ಈ ಎರಡು ಉಪಗ್ರಹಗಳನ್ನು ಒಳಗೊಂಡಿದ್ದ ‘ಮಾರ್ಸ್ ಕ್ಯೂಬ್ ಒನ್‌’ ಎಂಬ ಗಗನನೌಕೆಯನ್ನೂ ಉಡಾವಣೆ ಮಾಡಲಾಗಿತ್ತು. ಇದರಲ್ಲಿ ಬ್ರೀಫ್‌ಕೇಸ್‌ ಗಾತ್ರದ ಮಾರ್ಕೊ–ಎ ಮತ್ತು ಮಾರ್ಕೊ–ಬಿ ಎಂಬ ಎರಡು ಉಪಗ್ರಹಗಳಿವೆ. ಇವನ್ನು ಒಟ್ಟಾಗಿ ‘ಮಾರ್ಕೊ ಕ್ಯೂಬ್‌ಸ್ಯಾಟ್ಸ್‌’ ಎಂದು ಹೆಸರಿಸಲಾಗಿದೆ.

‘ಈ ಉಪಗ್ರಹಗಳು ತಮ್ಮದೇ ಆದ ಕಾರ್ಯ ನಿರ್ವಹಿಸಲಿದ್ದು, ಇನ್‌ಸೈಟ್‌ ಗಗನನೌಕೆಯನ್ನು ಹಿಂಬಾಲಿಸಲಿವೆ. ಸೌರ ಶಕ್ತಿ ಬಳಸಿಕೊಂಡು ಚಾರ್ಜ್‌ ಆಗುತ್ತವೆ. ಈ ಯೋಜನೆಗೆ ‘ನಾಸಾ’ ಬಳಸಿದ ಬಾಹ್ಯಾಕಾಶ ತಂತ್ರಜ್ಞಾನದ ಗುಣಮಟ್ಟ, ಕಾರ್ಯಕ್ಷಮತೆ, ಗಗನನೌಕೆಯ ಕಾರ್ಯಕ್ಷಮತೆ ಮುಂತಾದವನ್ನು ಪರೀಕ್ಷಿಸಲಿವೆ. ನಂತರ ತಮಗೆ ದೊರೆತ ಮಾಹಿತಿಯನ್ನು ವಿಶೇಷ ಆ್ಯಂಟೆನಾ ಮೂಲಕ ಸಂದೇಶದ ರೂಪದಲ್ಲಿ ಕಳುಹಿಸುತ್ತವೆ. ಆ ಮೂಲಕ ನೂತನ ಸಂವಹನ ಮಾದರಿಯ ಅಧ್ಯಯನಕ್ಕೂ ನೆರವಾಗಲಿವೆ’ ಎಂದು ಮಾರ್ಕೊ ಯೋಜನೆಯ ಮುಖ್ಯ ಎಂಜಿನಿಯರ್, ನಾಸಾದ ಜೆಟ್‌ ಪ್ರಪಲ್ಶನ್‌ ಪ್ರಯೋಗಾಲಯದ ಆ್ಯಂಡಿ ಕ್ಲೆಷ್ ತಿಳಿಸಿದ್ದಾರೆ.

ADVERTISEMENT

‘ಗಗನನೌಕೆ ರಚಿಸುವುದು ಹೇಗೆ ಎಂಬುದನ್ನು ಬೋಧಿಸಲು ಈ ಕ್ಯೂಬ್‌ಸ್ಯಾಟ್‌ ಉಪಗ್ರಹಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಇಂದು ಇವುಗಳನ್ನು ಖಾಸಗಿ ಕಂಪನಿಗಳು ಮತ್ತು ಕೆಲ ಸಂಶೋಧನಾ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಇವು ತಲಾ 2.5 ಕೆ.ಜಿ ತೂಕ ಹೊಂದಿವೆ’ ಎಂದು ಅವರು ವಿವರಿಸಿದ್ದಾರೆ.

ಮುಖ್ಯಾಂಶಗಳು

* ಸೌರಶಕ್ತಿ ಬಳಸಿಕೊಂಡು ಚಾರ್ಜ್‌ ಆಗುವ ಉಪಗ್ರಹಗಳು

* ‘ಮಾರ್ಕೊ ಕ್ಯೂಬ್‌ಸಾಟ್ಸ್‌’ನಿಂದ ಗಗನನೌಕೆಗಳ ಕಾರ್ಯಕ್ಷಮತೆ ಪರಿಶೀಲನೆ

* ಆ್ಯಂಟೆನಾ ಮೂಲಕ ಸಂದೇಶ ರೂಪದಲ್ಲಿ ಮಾಹಿತಿ ರವಾನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.