ADVERTISEMENT

'ನಿಷ್ಪಕ್ಷಪಾತ ತನಿಖೆ ಅನುಮಾನ'

ಪರ್ವೇಜ್ ಮುಷರಫ್ ವಿರುದ್ಧ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

ಇಸ್ಲಾಮಾಬಾದ್ (ಪಿಟಿಐ):  ಮಾಜಿ ಸೇನಾ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ನ್ಯಾಯಮೂರ್ತಿಯವರ ವ್ಯಕ್ತಿತ್ವವೇ ವಿವಾದಾತ್ಮಕವಾಗಿದ್ದು, ಈ ಪ್ರಕರಣದ ತನಿಖೆಯು ನಿಷ್ಪಪಕ್ಷಪಾತವಾಗಿ ನಡೆಯುವುದರ ಬಗ್ಗೆ ಅನುಮಾನ ಇದೆ ಎಂದು ಅಖಿಲ ಪಾಕಿಸ್ತಾನ ಮುಸ್ಲಿಂ ಲೀಗ್ ಪಕ್ಷ ಹೇಳಿದೆ.

ನ್ಯಾಯಮೂರ್ತಿ ಶೌಕತ್ ಅಜೀಜ್ ಸಿದ್ದಿಕಿ ಅವರು, ಲಾಲ್ ಮಸೀದಿ ಕಾರ್ಯಾಚರಣೆಯ ಸಂದರ್ಭದಲ್ಲಿ ಬಂಧನಕ್ಕೊಳಗಾದ ಅಬ್ದುಲ್ ಅಜೀಜ್ ಎಂಬ ತೀವ್ರವಾದಿ ಮೌಲ್ವಿ ಪರವಾಗಿ ಭಯೋತ್ಪಾದಕ ನಿಗ್ರಹ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

`ಇಂಥ ತೀವ್ರವಾದಿ ಪರ ವಾದ ಮಾಡಿದ ನ್ಯಾಯವಾದಿಯೊಬ್ಬರು ಪರ್ವೇಜ್ ಮುಷರಫ್ ಅವರ ಪ್ರಕರಣದಲ್ಲಿ ತೀರ್ಪು ನೀಡುವ ನ್ಯಾಯಮೂರ್ತಿಗಳಾಗುತ್ತಾರೆಂಬುದು ಹಾಸ್ಯಾಸ್ಪದ ಸಂಗತಿ.  ಮುಷರಫ್ ಲಾಲ್ ಮಸೀದಿ ಕಾರ್ಯಚರಣೆಗೆ ಆದೇಶಿಸಿದ್ದರು' ಎಂದು ಮುಷರಫ್ ಅವರ ಪಕ್ಷ ಅಖಿಲ ಪಾಕಿಸ್ತಾನ ಮುಸ್ಲಿಂ ಲೀಗ್ (ಎಪಿಎಂಎಲ್) ವಕ್ತಾರೆ ಆಸಿಯಾ ಇಷ್ಕ್ ವ್ಯಂಗ್ಯವಾಡಿದ್ದಾರೆ.

`ಸಿದ್ದಿಕಿಯವರು 2002ರ ಸಾರ್ವತ್ರಿಕ ಚುನಾವಣೆಯಲ್ಲಿ ರಾವಲ್ಪಿಂಡಿಯ ಲೋಕಸಭಾ ಕ್ಷೇತ್ರದಿಂದ ಜಮಾತ್-ಎ- ಇಸ್ಲಾಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು' ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.