ADVERTISEMENT

ನ್ಯಾಯಮೂರ್ತಿ ಸ್ಥಾನ ಶ್ರೀನಿವಾಸನ್ ನೇಮಕಕ್ಕೆ ಸೆನೆಟ್‌ನಲ್ಲಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಮೇಲ್ಮನವಿ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ಭಾರತೀಯ ಮೂಲದ ಶ್ರೀಕಾಂತ್ ಶ್ರೀನಿವಾಸನ್ ಅವರನ್ನು ನೇಮಿಸಲು ಸಂಸತ್‌ನಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.

ಭಾರತೀಯ ಮೂಲದ ಸಂಸದ ಅಮಿ ಬೆರಾ, ಇನ್ನಿತರ ಸಂಸದರು ಹಾಗೂ ರಾಷ್ಟ್ರದ ನ್ಯಾಯಾಂಗ ವಲಯದಿಂದ ಕೂಡ ಶ್ರೀನಿವಾಸನ್ ಅವರಿಗೆ ಬೆಂಬಲ ಕೇಳಿಬಂದಿದೆ.

ಸಂಸತ್ ಇವರ ನೇಮಕಾತಿಗೆ ಅನುಮೋದನೆ ನೀಡಿದ್ದೇ ಆದರೆ, 46 ವರ್ಷದ ಶ್ರೀನಿವಾಸನ್ ಅವರು ರಾಷ್ಟ್ರದ ಎರಡನೇ ಅತ್ಯುನ್ನತ ನ್ಯಾಯಾಲಯವಾದ `ಕೊಲಂಬಿಯಾ ಮೇಲ್ಮನವಿ ಸಂಚಾರಿ ಪೀಠ'ದ ನ್ಯಾಯಮೂರ್ತಿಯಾಗಲಿದ್ದಾರೆ. ಅಷ್ಟೇ ಅಲ್ಲದೆ, ಈ ಸಂಚಾರಿ ಪೀಠದ ನ್ಯಾಯಮೂರ್ತಿ ಹುದ್ದೆಗೇರಿದ ದಕ್ಷಿಣ ಏಷ್ಯಾದ ಮೊತ್ತ ಮೊದಲಿಗರಾಗುವ ಮೂಲಕ ಇತಿಹಾಸವನ್ನು ಕೂಡ ಸೃಷ್ಟಿಸಲಿದ್ದಾರೆ.

ಪ್ರಸ್ತುತ ಒಬಾಮ ಸರ್ಕಾರದ ಪ್ರಧಾನ ಉಪ ಸಾಲಿಸಿಟರ್ ಜನರಲ್ ಆಗಿರುವ ಶ್ರೀನಿವಾಸನ್ ಅವರ ಕಾನೂನು ಪರಿಣತಿ, ಪ್ರಾಮಾಣಿಕತೆ, ಅನುಭವ ಹಾಗೂ ವ್ಯಾಸಂಗದ ಹಿನ್ನೆಲೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.