ADVERTISEMENT

ನ್ಯಾಯಾಂಗ ಆಯೋಗದ ಮುಂದೆ ಇಜಾಜ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST

 ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿ ಸೇನಾ ಕ್ಷಿಪ್ರಕ್ರಾಂತಿ ಸಾಧ್ಯತೆ ಬಗ್ಗೆ ನಾಲ್ಕು ದೇಶಗಳ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಬಂದಿದ್ದರಿಂದ ಕಳೆದ ವರ್ಷ ತಾವು ಅವೆುರಿಕದ ನಿವೃತ್ತ ಸೇನಾ ಮುಖ್ಯಸ್ಥರಿಗೆ ಮೆಮೊ ಕಳಿಸಿದ್ದಾಗಿ ಅಮೆರಿಕದ ಉದ್ಯಮಿ ಮನ್ಸೂರ್ ಇಜಾಜ್ ಹೇಳಿದ್ದಾರೆ.

ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿರುವ ನ್ಯಾಯಾಂಗ ಆಯೋಗವು ಗುರುವಾರ ನಡೆಸಿದ ವಿಚಾರಣೆಯ ವೇಳೆ ಇಜಾಜ್ ಲಂಡನ್‌ನಿಂದ ವಿಡಿಯೊ ಸಂಪರ್ಕದ ಮೂಲಕ ಈ ಹೇಳಿಕೆ ನೀಡಿದ್ದಾರೆ.

ಮಿಲಿಟರಿ ಕ್ರಾಂತಿಗೆ ಬೆಂಬಲ ಪಡೆಯುವ ಹಿನ್ನೆಲೆಯಲ್ಲಿ ಐಎಸ್‌ಐ ಮುಖ್ಯಸ್ಥ ಲೆ. ಜ. ಅಹಮದ್ ಷುಜಾ ಪಾಶಾ ಅವರು ವಿವಿಧ ರಾಷ್ಟ್ರಗಳಿಗೆ ನೀಡಿದ ಭೇಟಿಯ ಕುರಿತು ತನಗೆ ಮಾಹಿತಿ ದೊರೆತಿದ್ದಾಗಿಯೂ ಇಜಾಜ್ ತಿಳಿಸಿದ್ದಾರೆ.

ಅಲ್ಲದೇ ಈ ವಿಷಯವಾಗಿ ಸೇನಾ ಮುಖ್ಯಸ್ಥ ಜ. ಅಶ್ಫಕ್ ಪರ್ವೇಜ್ ಕಯಾನಿ, ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮತ್ತು ಅಧ್ಯಕ್ಷರ ಮಿಲಿಟರಿ ಕಾರ್ಯದರ್ಶಿಯವರ ಪ್ರತಿಕ್ರಿಯೆ ಕುರಿತೂ ತಮಗೆ ಮಾಹಿತಿ ದೊರೆತಿತ್ತು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಕ್ಷಿಪ್ರ ಕ್ರಾಂತಿ ಸಾಧ್ಯತೆ ಬಗ್ಗೆ ತಮಗೆ ಮಾಹಿತಿ ನೀಡಿದ ದೇಶಗಳ ಹೆಸರನ್ನು ಮಾತ್ರ ಇಜಾಜ್ ಬಹಿರಂಗ ಪಡಿಸಿಲ್ಲ.
 

ದಾಳಿ ವಿಷಯ ಮೊದಲೇ ತಿಳಿದಿತ್ತು

ಅಬೋಟ್ಟಾಬಾದ್‌ನಲ್ಲಿನ ಲಾಡೆನ್ ಮನೆ ಮೇಲೆ ಅಮೆರಿಕ ಸೇನೆ ನಡೆಸಿದ ದಾಳಿಯ ಬಗ್ಗೆ ಅಧ್ಯಕ್ಷ ಜರ್ದಾರಿ ಅವರಿಗೆ ಮೊದಲೇ ಮಾಹಿತಿ ಇತ್ತು ಎಂದೂ ಇಜಾಜ್ ಹೇಳಿದ್ದಾರೆ.

ಇಷ್ಟೇ ಅಲ್ಲದೆ ಪಾಕಿಸ್ತಾನದ ವಾಯು ಸಂಚಾರ ನಿಯಂತ್ರಣ ಸಿಬ್ಬಂದಿ ಮತ್ತು ಅಬೋಟ್ಟಾಬಾದ್‌ನಲ್ಲಿನ ಲಾಡೆನ್ ಅಡಗುತಾಣದ ಮೇಲೆ ದಾಳಿ ನಡೆಸಿದ ಅಮೆರಿಕದ ಹೆಲಿಕಾಪ್ಟರ್‌ಗಳ ಪೈಲಟ್‌ಗಳ ನಡುವಿನ ಮಾತುಕತೆಯ ವರದಿಯೂ ತಮಗೆ ದೊರೆತಿತ್ತು ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.