ADVERTISEMENT

ನ್ಯಾಯಾಂಗ ನಿಂದನೆ: ಪಾಕ್ ಪ್ರಧಾನಿ ಗಿಲಾನಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ/ಐಎಎನ್‌ಎಸ್): ಪಾಕಿಸ್ತಾನದ ಸುಪ್ರೀಂಕೋರ್ಟ್ ಗುರುವಾರ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿ, ಅವರಿಗೆ 30 ಸೆಕೆಂಡ್‌ಗಳ ಕಾಲ ಕಟಕಟೆಯಲ್ಲಿ ನಿಲ್ಲುವ ಸಾಂಕೇತಿಕ ಶಿಕ್ಷೆಯನ್ನೂ ವಿಧಿಸಿತು.

ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ಮರುತನಿಖೆಗೆ ಆದೇಶಿಸಲು ವಿಫಲರಾದ ಕಾರಣ ಗಿಲಾನಿ ವಿರುದ್ಧ ನ್ಯಾಯಾಂಗ ನಿಂದನೆ ಮಾಡಿದ ಆರೋಪ  ಹೊರಿಸಲಾಗಿತ್ತು.

ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 56 ವರ್ಷದ ಗಿಲಾನಿ ಆರು ತಿಂಗಳ ಸೆರೆವಾಸ ಅನುಭವಿಸಬೇಕಿತ್ತಾದರೂ, ಕೋರ್ಟ್ ಈ ಮಿತವಾದ ಶಿಕ್ಷೆಯನ್ನು ಮಾತ್ರ ನೀಡಿತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಸಿರುಲ್ ಮುಲ್ಕ್ ಅವರ ನೇತೃತ್ವದ ಏಳು ಸದಸ್ಯರ ನ್ಯಾಯಪೀಠವು, ಗಿಲಾನಿಯವರಿಗೆ ಜೈಲುಶಿಕ್ಷೆಯ ಬದಲಿಗೆ ಕೋರ್ಟ್ ಕಲಾಪ ಮುಗಿಯುವ ತನಕ ಕಟಕಟೆಯಲ್ಲಿ ನಿಲ್ಲುವ ಶಿಕ್ಷೆಯನ್ನು ಜಾರಿಗೊಳಿಸಿತು.

ADVERTISEMENT

ಶಿಕ್ಷೆಗೆ ಗುರಿಯಾಗುವ ಸಂಸದನ ಅನರ್ಹತೆಗೆ ಸಂಬಂಧಿಸಿದಂತೆ ಸಂವಿಧಾನದ 63(1ಜಿ) ವಿಧಿಯನ್ನು ಪ್ರಸ್ತಾಪಿಸಿರುವ ನ್ಯಾಯಪೀಠವು, ಗಿಲಾನಿಯವರಿಗೆ ಗಂಭೀರ ಪರಿಣಾಮದ ಎಚ್ಚರಿಕೆಯನ್ನೂ ನೀಡಿತು.

ಇಡೀ ಕಲಾಪ ಕೇವಲ 10 ನಿಮಿಷಗಳಿಗೂ ಕಡಿಮೆ ಅವಧಿಯಲ್ಲಿ ನಡೆದಿದ್ದು, ತೀರ್ಪು ಪ್ರಕಟಿಸಿ, ಗಿಲಾನಿ ಅವರಿಗೆ ಶಿಕ್ಷೆ ಜಾರಿಗೊಳಿಸಿದ ಕೂಡಲೇ ನ್ಯಾಯಮೂರ್ತಿಗಳು ನ್ಯಾಯಾಲಯದಿಂದ ಹೊರನಡೆದರು.
ಗಿಲಾನಿ ಪ್ರತಿಕ್ರಿಯೆ: ತೀರ್ಪಿನ ನಂತರ ಬಿಗಿ ಭದ್ರತೆಯ ನ್ಯಾಯಾಲಯದಿಂದ ಹೊರಬಂದ ಗಿಲಾನಿ ಮಾಧ್ಯಮಗಳೊಂದಿಗೆ ಮಾತನಾಡಿ, `ನಾವು ನ್ಯಾಯ ಯಾಚಿಸಿದೆವು. ಆದರೆ ತೀರ್ಪು ಸೂಕ್ತವಾಗಿಲ್ಲ~ ಎಂದು ಪ್ರತಿಕ್ರಿಯಿಸಿದರು. ವಿಚಾರಣೆಯ ಸಂದರ್ಭದಲ್ಲಿ ಖಿನ್ನರಾಗಿದ್ದಂತೆ ಕಂಡುಬಂದ ಅವರು, ತೀರ್ಪು ಹೊರಬಿದ್ದ ಬಳಿಕ ತಮ್ಮ ಪುತ್ರರೊಂದಿಗೆ ವಕೀಲರು ಮತ್ತು ಸಂಪುಟ ಸಹೋದ್ಯೋಗಿಗಳ ಕೈಕುಲುಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.