ADVERTISEMENT

ಪಾಕಿಸ್ತಾನ: ನಿಂತಿದ್ದ ಬಸ್ಸಿನಲ್ಲಿ ಬಾಂಬ್ ಸ್ಫೋಟ, ಕನಿಷ್ಠ 15 ಬಲಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 10:32 IST
Last Updated 17 ಡಿಸೆಂಬರ್ 2012, 10:32 IST

ಇಸ್ಲಾಮಾಬಾದ್ (ಐಎಎನ್ ಎಸ್): ಪಾಕಿಸ್ತಾನದ ವಾಯವ್ಯ ಗುಡ್ಡಗಾಡು ಪ್ರದೇಶದ ಬಸ್ ನಿಲ್ದಾಣವೊಂದರಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ ಕನಿಷ್ಠ 15 ಮಂದಿ ಮೃತರಾಗಿ ಇತರ 40 ಮಂದಿ ಗಾಯಗೊಂಡ ಘಟನೆ ಸೋಮವಾರ ಘಟಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಆಫ್ಘನ್ ಗಡಿ ಭಾಗದಲ್ಲಿನ ಒಕ್ಕೂಟ ಆಡಳಿತ ಗುಡ್ಡಗಾಡು ಪ್ರದೇಶದ (ಎಫ್ಎಟಿಎ) ಜಮ್ರುದ್ ಪಟ್ಟಣದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಬಾಂಬ್ ದಾಳಿ ನಡೆಯಿತು ಎಂದು ರಾಜ್ಯ ಸ್ವಾಮ್ಯದ ಟಿವಿ ವಾಹಿನಿ ಪಿಟಿವಿಯನ್ನು ಉಲ್ಲೇಖಿಸಿ ಕ್ಷಿನ್ಹುವಾ ವರದಿ ಮಾಡಿದೆ.

ಮಾರುಕಟ್ಟೆ ಪ್ರದೇಶದಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬಸ್ಸಿನಲ್ಲಿ ಬಾಂಬ್ ಅವಿತಿಡಲಾಗಿತ್ತು.
ದಾಳಿಯಲ್ಲಿ ಮೃತರಾದವರ ಸಂಖ್ಯೆ 17 ಮತ್ತು ಗಾಯಾಳುಗಳ ಸಂಖ್ಯೆ 50ಕ್ಕೂ ಹೆಚ್ಚು ಎಂದು ಜಿಯೋ ನ್ಯೂಸ್ ಹೇಳಿದೆ.

ಜಮ್ರುದ್ ನಿಂದ 20 ಕಿ.ಮೀ. ದೂರದ ಪೇಷಾವರದಲ್ಲಿನ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಒಯ್ದು ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸ್ಫೋಟ ಸ್ಥಳದಲ್ಲಿ ಕನಿಷ್ಠ 10 ವಾಹನಗಳು ಮತ್ತು ಹಲವಾರು ಅಂಗಡಿಗಳೂ ನಾಶಗೊಂಡಿವೆ ಎಂದು ಎಆರ್ ವೈ ಟಿವಿ ವಾಹಿನಿ ವರದಿ ಮಾಡಿದೆ.

ವುದೇ ಸಂಘಟನೆ ಈವರೆಗೂ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.