ADVERTISEMENT

ಪಾಕ್‌ಗೆ ಒತ್ತಡ: ಚೀನಾಕ್ಕೆ ಗಡ್ಕರಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ಬೀಜಿಂಗ್ (ಪಿಟಿಐ): ಭಾರತವನ್ನು ಗುರಿಯಾಗಿರಿಸಿಕೊಂಡು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವಂತೆ ತನ್ನ ಸಾರ್ವಕಾಲಿಕ ಮಿತ್ರರಾಷ್ಟ್ರ ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಮುಂದಾಗುವಂತೆ ಚೀನಾವನ್ನು ಬಿಜೆಪಿ ಆಗ್ರಹಿಸಿದೆ.ಪಾಕ್‌ಗೆ ತಾನು ನೀಡುತ್ತಿರುವ ಅಣ್ವಸ್ತ್ರ ಮತ್ತು ಸೇನಾ ನೆರವು ಭಾರತವನ್ನು ಗುರಿಯಾಗಿಸದಂತೆ ನೋಡಿಕೊಳ್ಳಬೇಕು ಎಂದು ಕೂಡಾ ಇಲ್ಲಿಗೆ ಭೇಟಿ ನೀಡಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಶನಿವಾರ ಇಲ್ಲಿ ಚೀನಾ ಸರ್ಕಾರವನ್ನು ಒತ್ತಾಯಿಸಿದರು.

ಚೀನಾ ನಾಯಕರೊಡನೆ ವಿಸ್ತೃತ ವಲಯದ ಮಾತುಕತೆ ನಡೆಸಿದ ನಂತರ ತಮ್ಮ ನೇತೃತ್ವದ ಬಿಜೆಪಿ ನಿಯೋಗದೊಡನೆ ಬಂದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪಾಕಿಸ್ತಾನವು ಗಡಿ ನುಸುಳುವಿಕೆಯ ಭಯೋತ್ಪಾದನೆ ಮೂಲಕ ಭಾರತಕ್ಕೆ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುವುದನ್ನು ಮುಂದುವರಿಸುತ್ತಿದೆ ಎಂದೂ ಆರೋಪಿಸಿದರು.

ಪಾಕ್ ಸರ್ಕಾರವು ಭಯೋತ್ಪಾದನೆಯನ್ನು ಬೆಂಬಲಿಸುತ್ತಾ, ಉಗ್ರರ ಗಡಿ ನುಸುಳುವಿಕೆಯನ್ನು ಬೆಂಬಲಿಸುತ್ತಿದೆ. ಪರಮಾಣು ರಿಯಾಕ್ಟರ್ ಮತ್ತು ಸೇನಾ ನೆರವು ಮತ್ತಿತರ ಕ್ಷೇತ್ರಗಳಿಗೆ ಚೀನಾ ನೀಡುತ್ತಿರುವ ಸಹಾಯವನ್ನು ಅದು ಭಾರತದ ವಿರುದ್ಧ ಬಳಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪಾಕಿಸ್ತಾನವು ಭಯೋತ್ಪಾದನೆಗೆ ನೆರವು ನೀಡುವುದನ್ನು ನಿಲ್ಲಿಸಿ, ತನ್ನ ದೇಶದಲ್ಲಿರುವ ಉಗ್ರರ ಶಿಬಿರಗಳನ್ನು ನಾಶಪಡಿಸುವ ತನಕ ಮತ್ತು ಮುಂಬೈ ಮೇಲೆ ದಾಳಿ ನಡೆಸಿದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಆ ದೇಶದೊಂದಿಗೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಸಬಾರದು ಎಂಬ ನಿಲುವನ್ನು ತಮ್ಮ ಪಕ್ಷ ಹೊಂದಿರುವುದಾಗಿಯೂ ಅವರು ತಿಳಿಸಿದರು.

ಧ್ವಜಾರೋಹಣ: ಶ್ರೀನಗರದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವ ಬಿಜೆಪಿ ಯುವ ಮೋರ್ಚಾ ನಿರ್ಧಾರವನ್ನು ಸಮರ್ಥಿಸಿದ ಅವರು, ಈ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಸರ್ವಪಕ್ಷ ಕಾರ್ಯಕ್ರಮವಾಗಿ ಮಾಡುವಂತೆ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳನ್ನು ಅವರು ಆಗ್ರಹಪಡಿಸಿದರು.ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಬಿಜೆಪಿ ಮುಸ್ಲಿಂ ಕಾರ್ಯಕರ್ತರು ಕೂಡಾ ಭಾಗವಹಿಸುತ್ತಿದ್ದು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಚೀನಾ ಪ್ರತಿಕ್ರಿಯೆ: ಈ ಮಧ್ಯೆ, ನಿತಿನ್ ಗಡ್ಕರಿ ನೇತೃತ್ವದ ಬಿಜೆಪಿ ನಿಯೋಗವು ಪ್ರಸ್ತಾಪ ಮಾಡಿರುವ ಪ್ರಮುಖ ವಿಷಯಗಳ ಕಡೆ ಗಮನಹರಿಸುವುದಾಗಿ ಹೇಳಿರುವ ಚೀನಾ, ಶಾಂತಿಯುತ ಸಮಾಲೋಚನಾ ಮಾರ್ಗದ ಮೂಲಕ ಎರಡೂ ದೇಶಗಳಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಮ್ಮತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.