ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ನೈರುತ್ಯ ಭಾಗದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿ ಕುಸಿದು ಬಿದ್ದ ಕಾರಣ ಸುಮಾರು 45 ಮಂದಿ ಸತ್ತಿದ್ದಾರೆ. ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಲೂಚಿಸ್ತಾನ ರಾಜಧಾನಿ ಕ್ವೆಟ್ಟಾದಿಂದ ಸುಮಾರು 30 ಕಿ.ಮೀ. ದೂರದ ಸಾರಂಗ್‌ನಲ್ಲಿರುವ ಪಾಕಿಸ್ತಾನ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಪಿಎಂಡಿಸಿ) ಸರ್ಕಾರಿ ಒಡೆತನದ ಈ ಗಣಿಯಲ್ಲಿ ಮಿಥೇನ್ ಅನಿಲದಿಂದಾಗಿ ಭಾನುವಾರ ಸರಣಿ ಸ್ಫೋಟ ಸಂಭವಿಸಿತ್ತು. ನಂತರ ಗಣಿ ಕುಸಿದು ಬಂದಿದೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ. ಇದುವರೆಗೆ
24 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಈ ಶವಗಳು ಸುಟ್ಟು ಕರಕಲಾಗಿದ್ದು, ಸ್ಫೋಟದ ಜತೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಗಾಳಿ ಆಡಲು ಅವಕಾಶ ಇಲ್ಲದ ಗಣಿಯಲ್ಲಿ ಮಿಥೇನ್ ಅನಿಲ ಇದ್ದು, ಭಾನುವಾರ ಸರಣಿಯೋಪಾದಿಯಲ್ಲಿ ಸ್ಫೋಟಗೊಂಡಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.