ADVERTISEMENT

ಪ್ರಯಾಣಿಕರನ್ನು ಪಾರು ಮಾಡಿದ ಮಹಿಳಾ ಪೈಲಟ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST
ಹಾನಿಯಾದ ವಿಮಾನ ಎಂಜಿನ್‌ ಪ‍ರಿಶೀಲನೆ ನಡೆಸುತ್ತಿರುವ ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ತಂಡದ ಅಧಿಕಾರಿಗಳು –ರಾಯಿಟರ್ಸ್‌ ಚಿತ್ರ
ಹಾನಿಯಾದ ವಿಮಾನ ಎಂಜಿನ್‌ ಪ‍ರಿಶೀಲನೆ ನಡೆಸುತ್ತಿರುವ ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ತಂಡದ ಅಧಿಕಾರಿಗಳು –ರಾಯಿಟರ್ಸ್‌ ಚಿತ್ರ   

ನ್ಯೂಯಾರ್ಕ್‌: ಆ ವಿಮಾನ ಹಾರಾಟ ಆರಂಭಿಸಿ ಕೆಲವು ನಿಮಿಷಗಳಷ್ಟೇ ಕಳೆದಿತ್ತು, ಎಲ್ಲಾ 149 ಪ್ರಯಾಣಿಕರು ಓದಿನಲ್ಲಿ, ಮನರಂಜನಾ ಚಟುವಟಿಕೆಗಳಲ್ಲಿ ತಲ್ಲೀನರಾಗಿದ್ದರು. ಆಗ 30 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದ ಎಂಜಿನ್‌ ಏಕಾಏಕಿ ಸ್ಫೋಟಗೊಂಡಿತ್ತು...!

ವಿಮಾನದ ಹೊರಭಾಗದಲ್ಲಿ ಆದ ಬೆಳವಣಿಗೆಯಿಂದ ಒಳಗಿದ್ದ ಪ್ರಯಾಣಿಕರು ದಿಗ್ಭ್ರಾಂತರಾದರು. ಆತಂಕಕ್ಕೆ ಒಳಗಾಗಿ, ಸಾಮೂಹಿಕವಾಗಿ ದೇವರ ಮೊರೆಹೋದರು. ಉಸಿರಾಡಲೂ ಕಷ್ಟಪಡುತ್ತಿದ್ದ ಅವರು, ಬದುಕುಳಿಯುವ ಆಸೆಯನ್ನೇ ಕಳೆದುಕೊಂಡಿದ್ದರು.

ಇಂತಹ ಸಂದರ್ಭಕ್ಕೆ ಸಾಕ್ಷಿಯಾಗಿದ್ದು, ಮಂಗಳವಾರ ನ್ಯೂಯಾರ್ಕ್‌ನಿಂದ ದಲ್ಲಾಸ್‌ಗೆ ಹೊರಟಿದ್ದ ಸೌತ್‌ವೆಸ್ಟ್‌ 1380 ವಿಮಾನ. ಮಾರ್ಗ ಮಧ್ಯೆ ಎಂಜಿನ್‌ ಕಾರ್ಯ ಸ್ಥಗಿತಗೊಂಡಾಗ ಪೈಲಟ್‌ ಮುಂಜಾಗ್ರತೆ ವಹಿಸಿ ಫಿಲಡೆಲ್ಪಿಯಾ ಅಂತರರಾಷ್ಟ್ರೀಯ ವಿಮಾನ

ADVERTISEMENT

ನಿಲ್ದಾಣದಲ್ಲಿ ವಿಮಾನ ಇಳಿಸಿದರು. ಆದರೆ ಕಿಟಕಿಯಿಂದ ತೂರಿ ಬಂದ ಎಂಜಿನ್‌ನ ತುಣುಕು ನ್ಯೂ ಮೆಕ್ಸಿಕೊದ ರಿಯಾರ್ಡಾನ್‌ (43) ತಲೆಗೆ ತಾಗಿದ್ದರಿಂದ ಅವರು ಮೃತಪಟ್ಟರು.

ಪ್ರತಿಕೂಲ ಸಂದರ್ಭದಲ್ಲೂ ದೃತಿಗೆಡದೆ ಪರಿಸ್ಥಿತಿ ನಿಭಾಯಿಸಿದ ಮಹಿಳಾ ಪೈಲಟ್‌ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಒಂದು ಎಂಜಿನ್ ಕಾರ್ಯ ಸ್ಥಗಿತಗೊಂಡು ಅದರ ಮೇಲ್ಭಾಗದ ಭಾಗ ಕಿತ್ತು, ಕಿಟಕಿಯ ಗಾಜು ನಾಶಗೊಂಡಿತ್ತು. ಈ ವೇಳೆ ಕಾಕ್‌ಪಿಟ್‌ನಲ್ಲಿದ್ದ ಮಹಿಳಾ ಪೈಲಟ್‌ ಟೆಮ್ಮಿ ಜೊ ಶಲ್ಟ್ಸ್‌ ಪ್ರಯಾಣಿಕರಿಗೆ ವೈದ್ಯಕೀಯ, ತಾಂತ್ರಿಕ ನೆರವು ನೀಡುವಂತೆ ವಾಯು ಸಂಚಾರ ನಿಯಂತ್ರಣ ಕೊಠಡಿಗೆ ಸಂದೇಶ ಕಳುಹಿಸಿದ್ದರು.

ಪೈಲಟ್‌– ಟ್ರಾಫಿಕ್‌ ಕಂಟ್ರೋಲರ್‌ ನಡುವಣ ಸಂಭಾಷಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಟೆಮ್ಮಿ ಜೊ ಶಲ್ಟ್ಸ್‌  ಯುದ್ಧವಿಮಾನ ಚಲಾಯಿಸಿದ ಅನುಭವವನ್ನೂ  ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.