ADVERTISEMENT

ಪ್ರಾಣಿಗಳಿಗಿದೆ ಸ್ವಯಂ ಚಿಕಿತ್ಸಾ ಶಕ್ತಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ವಾಷಿಂಗ್ಟನ್ (ಪಿಟಿಐ): ಕಾಯಿಲೆ ಮತ್ತು ಗಾಯಗಳಿಗೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಸಾಮರ್ಥ್ಯ ಪ್ರಾಣಿಗಳಿಗಿದೆ ಎಂಬುದು ತಿಳಿದ ವಿಷಯವೇ. ಆದರೆ, ಈ ಸಾಮರ್ಥ್ಯ  ಮೊದಲು ಊಹಿಸಿದ್ದಕ್ಕಿಂತ ಹೆಚ್ಚು ವಿಸ್ತಾರವಾಗಿದೆ ಎಂಬುದು ಹೊಸ ಸಂಶೋಧನೆಯಿಂದ ಖಚಿತವಾಗಿದೆ.

ಪ್ರಾಣಿಗಳು ಕಾಯಿಲೆಗಳಿಗೆ ಸ್ವತಃ ಚಿಕಿತ್ಸೆ ಮಾಡಿಕೊಳ್ಳಲು ಸ್ವಾಭಾವಿಕವಾದ ಹಾಗೂ ಸುತ್ತಮುತ್ತಲ ವಾತಾವರಣದಿಂದ ಕಲಿತ ವಿಧಾನಗಳನ್ನೇ ಬಳಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಸ್ವಯಂ ಚಿಕಿತ್ಸೆ ರೂಢಿ ಇರುವ ಜೀವಿಗಳಾದ ಕೀಟ, ಇರುವೆ ಮತ್ತು ನೊಣಗಳು ನಮ್ಮ ಪರಿಸರ, ಇತರ ಪ್ರಾಣಿಗಳ ಉಗಮ ಹಾಗೂ ಅವುಗಳ ಪರಾವಲಂಬಿಗಳ ಮೇಲೆ ಗಾಢ ಪರಿಣಾಮ ಬೀರಿವೆ ಎನ್ನುತ್ತಾರೆ `ಮಿಷಿಗನ್ ವಿಶ್ವವಿದ್ಯಾಲಯ'ದ ಪರಿಸರ ಶಾಸ್ತ್ರಜ್ಞ ಮಾರ್ಕ್ ಹಂಟರ್.

ಭವಿಷ್ಯದ ಔಷಧಗಳ ತಯಾರಿಕೆಯಲ್ಲಿ ಸಸ್ಯಗಳು ಭರವಸೆಯ ಸಂಪನ್ಮೂಲ ಆಗಿರುವುದರಿಂದ ಪ್ರಾಣಿಗಳ ಸ್ವಯಂ ಚಿಕಿತ್ಸೆ ಸಾಮರ್ಥ್ಯದ ಮೇಲಿನ ಅಧ್ಯಯನವು  ಮಾನವರ ಕಾಯಿಲೆಗಳಿಗೂ ಔಷಧ ಕಂಡು ಹಿಡಿಯಲು ಹೊಸ ದಾರಿ ತೋರಿಸಬಹುದು ಎಂಬುದು  ವಿಜ್ಞಾನಿಗಳ ಅಭಿಪ್ರಾಯ.

ಈ ಅಧ್ಯಯನ ಕುರಿತು ಹಂಟರ್, ತಮ್ಮ ಸಹೋದ್ಯೋಗಿಗಳಿಬ್ಬರ ಜತೆಗೂಡಿ ವಿಮರ್ಶಾ ಲೇಖನ ಬರೆದಿದ್ದಾರೆ.

`ಇತರ ಪ್ರಾಣಿಗಳನ್ನು ಗಮನಿಸುವ ಮೂಲಕ ಕಾಯಿಲೆಗಳಿಗೆ ಹಾಗೂ ಪರಾವಲಂಬಿಗಳಿಗೆ ಹೇಗೆ ಚಿಕಿತ್ಸೆ ನೀಡಬಹುದು ಎಂಬುದನ್ನು ಅರಿಯಬಹುದು' ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.