ADVERTISEMENT

ಫಾಯ್ ಸಂಸ್ಥೆಯ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ವಾಷಿಂಗ್ಟನ್ (ಪಿಟಿಐ): ವಿಶ್ವಸಂಸ್ಥೆಯ ಅಧಿಕೃತ `ವಿಶೇಷ ಸಮಾಲೋಚಕ~ ಸ್ಥಾನಮಾನ ನೀಡುವಂತೆ ಕೋರಿ ಕಾಶ್ಮೀರ ಪ್ರತ್ಯೇಕತಾವಾದಿ ಗುಲಾಂ ನಬಿ ಫಾಯ್ ನೇತೃತ್ವದ ಸರ್ಕಾರೇತರ ಸಂಸ್ಥೆ `ಕಾಶ್ಮೀರ-ಅಮೆರಿಕನ್ ಕೌನ್ಸಿಲ್ (ಕೆಎಸಿ)~ ದಶಕಗಳ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿದೆ.

ಫೆಬ್ರುವರಿ ಮೊದಲ ವಾರದಲ್ಲಿ ನ್ಯೂಯಾರ್ಕ್‌ನಲ್ಲಿ ಸಭೆ ಸೇರಿದ್ದ ಸಮಿತಿ, ದಶಕಗಳ ಹಿಂದೆ (1999) ಕೆಎಸಿ ಸಲ್ಲಿಸಿದ್ದ ಅರ್ಜಿಯ ಪರಾಮರ್ಶೆ ನಡೆಸಿತು. ಮೂರು ಜ್ಞಾಪನಾ ಪತ್ರಗಳ ಹೊರತಾಗಿಯೂ ಸಮಿತಿಯ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಫಾಯ್ ಸಂಸ್ಥೆ ವಿಫಲವಾದ ಹಿನ್ನೆಲೆಯಲ್ಲಿ ಅರ್ಜಿ ತಳ್ಳಿಹಾಕಲಾಗಿದೆ.

ಕೆಎಸಿಗೆ ಕೇಳಲಾದ ಪ್ರಶ್ನೆಗಳೇನು ಎಂಬ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಗೊಳಿಸಿಲ್ಲ. ಸಂಸ್ಥೆಯ ಅನುದಾನದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು ಎಂದು ತಿಳಿದುಬಂದಿದೆ. ಪ್ರತಿ ಸಾರಿ ಅರ್ಜಿ ವಿಚಾರಣೆಗೆ ಬಂದಾಗ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು. ಮನ್ನಣೆ ಕೋರಿ ಸಲ್ಲಿಸಿದ್ದ ಒಟ್ಟು 20 ಅರ್ಜಿಗಳ ಪೈಕಿ ಲಡಾಖ್‌ನ ಲೇಹ್‌ದಲ್ಲಿರುವ ಮಹಾಬೋಧಿ ಅಂತರ ರಾಷ್ಟ್ರೀಯ ಧ್ಯಾನ ಕೇಂದ್ರ, ಜಿಜಿಎಸ್ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಸಂಸ್ಥೆಯ ಅರ್ಜಿಗಳೂ ಸೇರಿವೆ. ಆದರೆ, ಅವನ್ನೂ ತಿರಸ್ಕರಿಸಲಾಗಿದೆ. ಇದೇ 17 ರಂದು ವರದಿ ಅಂತಿಮಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.