ADVERTISEMENT

ಫಿಲಿಪ್ಪೀನ್ಸ್: ಭಾರಿ ಭೂಕಂಪ, 44 ಸಾವು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST
ಫಿಲಿಪ್ಪೀನ್ಸ್: ಭಾರಿ ಭೂಕಂಪ, 44 ಸಾವು
ಫಿಲಿಪ್ಪೀನ್ಸ್: ಭಾರಿ ಭೂಕಂಪ, 44 ಸಾವು   

ಮನಿಲಾ (ಪಿಟಿಐ): ಫಿಲಿಪ್ಪೀನ್ಸ್‌ನ ಮಧ್ಯಭಾಗದಲ್ಲಿ ಸೋಮವಾರ ಸಂಭವಿಸಿದ ಭಾರಿ ಭೂಕಂಪದಲ್ಲಿ ಶಾಲಾ ಮಕ್ಕಳು ಸೇರಿದಂತೆ ಕನಿಷ್ಠ 44 ಮಂದಿ ಮೃತಪಟ್ಟಿದ್ದು, ಹಲವಾರು ಜನ ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 11.49ಕ್ಕೆ  ರಿಕ್ಟರ್ ಮಾಪಕದಲ್ಲಿ 6.9 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಭೂ ಕಂಪದ ತೀವ್ರತೆಗೆ  ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಎದ್ದಿದ್ದು, ಸಮುದ್ರ ದಂಡೆಯಲ್ಲಿದ್ದ ಬಿದಿರು ಹಾಗೂ ಮರದ ಕಾಟೇಜ್‌ಗಳು ಕೊಚ್ಚಿ ಹೋಗಿವೆ.

ನೆಗ್ರೋಸ್ ದ್ವೀಪದ ದುಮಾಗೇಟ್ ನಗರದಿಂದ ಸುಮಾರು 70 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದ್ದು, ಶಾಲೆಯ ಗೋಡೆ ಕುಸಿದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಭೂಕಂಪದಿಂದ ಅನೇಕ ಕಡೆ ಭೂಕುಸಿತ ಉಂಟಾಗಿದ್ದು, ರಕ್ಷಣಾ ಹಾಗೂ ಶೋಧ ಕಾರ್ಯದಲ್ಲಿ ಸ್ಥಳೀಯ ಸರ್ಕಾರಗಳು ಸೇನೆ ಮತ್ತು ಪೊಲೀಸರೊಂದಿಗೆ ಸಹಕರಿಸುತ್ತಿವೆ. ಎರಡು ಕಡೆ ತೆರವು ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಮಂಡಳಿಯ ಕಾರ್ಯಕಾರಿ ನಿರ್ದೇಶಕ ಬೆನಿಟೊ ರಾಮೊಸ್ ಹೇಳಿದ್ದಾರೆ.

ಭೂಕಂಪದ ಹಿನ್ನೆಲೆಯಲ್ಲಿ ನೆಗ್ರೋಸ್ ಹಾಗೂ ನೆರೆಯ ಸೆಬು ದ್ವೀಪದ ನಡುವಿನ ಟನೊನ್ ಜಲಸಂಧಿಯುದ್ದಕ್ಕೂ ವಿಧಿಸಿದ್ದ ಸುನಾಮಿ ಎಚ್ಚರಿಕೆಯನ್ನು ನಂತರದಲ್ಲಿ ವಾಪಸ್ ಪಡೆಯಲಾಯಿತು.

ಪೆಸಿಫಿಕ್ ಪ್ರಾಂತ್ಯದಲ್ಲಿ ಸುನಾಮಿ ಎಚ್ಚರಿಕೆ ವಿಧಿಸಿಲ್ಲ. ಅಲ್ಲದೇ ಹವಾಯಿ ದ್ವೀಪಕ್ಕೆ ಸುನಾಮಿ ಭಯವೇನೂ ಇಲ್ಲ ಎಂದು ಫಿಲಿಪ್ಪೀನ್ಸ್‌ನ ಜ್ವಾಲಾಮುಖಿ ಹಾಗೂ ಸುನಾಮಿ ಅಧ್ಯಯನ ಕೇಂದ್ರವು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.