ADVERTISEMENT

ಫುಟ್‌ಬಾಲ್ ಹಿಂಸಾಚಾರ: 74 ಸಾವು, ಸಾವಿರಕ್ಕೂ ಹೆಚ್ಚು ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಕೈರೊ (ಈಜಿಪ್ಟ್) (ಐಎಎನ್‌ಎಸ್): ಈಜಿಪ್ಟ್‌ನ ಪೋರ್ಟ್‌ಸೆಡ್ ನಗರದಲ್ಲಿ ಬುಧವಾರ ಮಧ್ಯರಾತ್ರಿ ಫುಟ್‌ಬಾಲ್ ಪಂದ್ಯ ನಡೆಯುತ್ತಿದ್ದಾಗ ಸಂಭವಿಸಿದ ಹಿಂಸಾಚಾರ ಹಾಗೂ ಕಾಲ್ತುಳಿತದಲ್ಲಿ ಕನಿಷ್ಠ 74 ಜನ ಮೃತಪಟ್ಟಿದ್ದು, 1000ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಫುಟ್‌ಬಾಲ್ ಆಡುತ್ತಿದ್ದ ಎರಡು ಎದುರಾಳಿ ತಂಡಗಳ ನಡುವಿನ ಘರ್ಷಣೆ ಈ ಹಿಂಸಾಚಾರಕ್ಕೆ ಕಾರಣವಾಯಿತು ಎನ್ನಲಾಗಿದೆ. ರ್ಷಣೆ ನಡೆದ ಕ್ರೀಡಾಂಗಣದಲ್ಲಿ ಘಟನೆ ನಡೆದಾಗ 40,000ಕ್ಕೂ ಹೆಚ್ಚು ಜನರಿದ್ದರು.

ವಿವರ: ಪೋರ್ಟ್‌ಸೆಡ್‌ನ ಅಲ್-ಮಸ್ರಿ ತಂಡ, ಈಜಿಪ್ಟ್‌ನ ಪ್ರತಿಷ್ಠಿತ ಫುಟ್‌ಬಾಲ್ ತಂಡಗಳಲ್ಲಿ ಒಂದಾದ ಕೈರೊದ ಅಲ್-ಅಹ್ಲಿ ತಂಡವನ್ನು 3-1 ಗೋಲುಗಳಿಂದ ಸೋಲಿಸಿತು.

ಅತಿಥೇಯ ಅಲ್-ಮಸ್ರಿ ತಂಡದ ಉದ್ರಿಕ್ತ ಅಭಿಮಾನಿಗಳು ತಮ್ಮ ತಂಡ ಜಯ ಗಳಿಸಿದ ತಕ್ಷಣ ಕ್ರೀಡಾಂಗಣದೊಳಗೆ ನುಗ್ಗಿದರು. ಎದುರಾಳಿ ತಂಡದ ಅಭಿಮಾನಿಗಳ ಜತೆ ಕಾದಾಟಕ್ಕೆ ಇಳಿದರು. ಅಲ್-ಅಹ್ಲಿ ತಂಡದ ಆಟಗಾರರು ಹಾಗೂ ಕೋಚ್‌ಗೆ ಥಳಿಸಿದರು. ಇದರಿಂದಾಗಿ ಗಾಬರಿಕೊಂಡ ಜನ ಓಡುತ್ತಿದ್ದಂತೆ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು.

ಘಟನೆಯಲ್ಲಿ ಮೃತಪಟ್ಟವರೆಲ್ಲ ಕಾಲ್ತುಳಿತ, ಆಘಾತ ಮತ್ತು ತಲೆಗಾದ ಗಾಯದಿಂದ ಮೃತಪಟ್ಟಿದ್ದಾರೆ ಎಂದು ಈಜಿಪ್ಟ್ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ರದ್ದಾದ ಪಂದ್ಯ: ಪೋರ್ಟ್‌ಸೆಡ್‌ನಲ್ಲಿ ನಡೆದ ಹಿಂಸಾಚಾರದ ಸುದ್ದಿ ಹರಡುತ್ತಿದ್ದಂತೆ ಕೈರೊದಲ್ಲಿ ನಡೆಯಬೇಕಿದ್ದ ಮತ್ತೊಂದು ಫುಟ್‌ಬಾಲ್ ಪಂದ್ಯ ರದ್ದುಗೊಳಿಸಲಾಯಿತು. ಕೋಪಗೊಂಡ ಕೈರೊ ತಂಡದ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬೆಂಕಿ ಹಚ್ಚಿದರು.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದ್ದು, ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಈಜಿಪ್ಟ್ ರಾಷ್ಟ್ರೀಯ ಟಿವಿ ವಾಹಿನಿ ತಿಳಿಸಿದೆ.

ಈ ಘಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ನಡೆಯಬೇಕಿದ್ದ ಎಲ್ಲ ಫುಟ್‌ಬಾಲ್ ಪಂದ್ಯಗಳನ್ನೂ ಅನಿರ್ದಿಷ್ಟಾವಧಿಗೆ ಮುಂದೂಡುವಂತೆ ಈಜಿಪ್ಟ್ ಫುಟ್‌ಬಾಲ್ ಅಸೋಸಿಯೇಷನ್ ಸೂಚಿಸಿದೆ. ಇದೇ ಕಾರಣಕ್ಕೆ ಗುರುವಾರ ಈಜಿಪ್ಟ್ ಸಂಸತ್ತಿನ ತುರ್ತು ಅಧಿವೇಶನ ನಡೆಯಿತು. ಅಲ್ಲಿ ಈಗ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.

ಕರಾಳ ದಿನ: ಪೋರ್ಟ್‌ಸೆಡ್ ಘಟನೆಯನ್ನು ಖಂಡಿಸಿರುವ ಫಿಫಾ ಅಧ್ಯಕ್ಷ ಜೋಸೆಫ್ ಬ್ಲಾಟರ್, ಇದು `ಫುಟ್‌ಬಾಲ್ ಇತಿಹಾಸದಲ್ಲಿ ಕರಾಳ ದಿನ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

1996ರಲ್ಲಿ ಗ್ವಾಟೆಮಾಲಾದಲ್ಲಿ ನಡೆದ ಫುಟ್‌ಬಾಲ್ ದುರಂತದ ಮಾದರಿಯ ಎರಡನೇ ಘಟನೆ ಇದಾಗಿದೆ. ಆಗ ಗ್ವಾಟೆಮಾಲಾ ಮತ್ತು ಕೋಸ್ಟರಿಕಾ ನಡುವೆ ಫುಟಬಾಲ್ ವಿಶ್ವಕಪ್ ಅರ್ಹತಾ ಪಂದ್ಯ ಆರಂಭವಾಗುವ ಮುನ್ನ ನಡೆದ ಘರ್ಷಣೆಯಲ್ಲಿ 80 ಜನ ಸತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.