ADVERTISEMENT

ಫೇಸ್‌ಬುಕ್‌ ದತ್ತಾಂಶ ಹಂಚಿಕೆಗೆ ಇಲ್ಲ ಅಂಕುಶ

ಮಾಹಿತಿ ಹಂಚಿಕೆಗಾಗಿಯೇ ಒಪ್ಪಂದ ಮಾಡಿಕೊಂಡಿರುವ ಸಾಮಾಜಿಕ ಜಾಲತಾಣ ಸಂಸ್ಥೆ

ಪಿಟಿಐ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌ : ಬಳಕೆದಾರರ ದತ್ತಾಂಶವು ಫೇಸ್‌ಬುಕ್‌ನಲ್ಲಿ ಸುರಕ್ಷಿತವಲ್ಲ, ಸಂವಹನ ಸಾಧನಗಳನ್ನು ತಯಾರಿಸುವ ವಿವಿಧ ಕಂಪನಿಗಳ ಜತೆಗೆ ಈ ದತ್ತಾಂಶವನ್ನು ಫೇಸ್‌ಬುಕ್‌ ಹಂಚಿಕೊಂಡಿದೆ ಎಂದು ದ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಫೇಸ್‌ಬುಕ್‌ ಖಾತೆದಾರರ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಆ್ಯಪಲ್‌ ಮತ್ತು ಮೈಕ್ರೊಸಾಫ್ಟ್‌ನಂತಹ ಕಂಪನಿಗಳ ಜತೆಗೆ ಇಂತಹ ಒಪ್ಪಂದ ಮಾಡಿಕೊಳ್ಳಲಾಗಿದೆ. ಖಾತೆದಾರರು ಮತ್ತು ಅವರ ಗೆಳೆಯರ ಬಳಗದ ಮಾಹಿತಿಯ ವರ್ಗಾವಣೆಯೂ ಇದರಲ್ಲಿ ಸೇರಿದೆ.

8.7 ಕೋಟಿ ಖಾತೆದಾರರ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಳ್ಳಲು ಬ್ರಿಟನ್‌ನ ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಜ್‌ ಅನಲಿಟಿಕಾಕ್ಕೆ ಅವಕಾಶ ನೀಡಲಾಗಿತ್ತು ಎಂಬ ಆಪಾದನೆ
ಯಿಂದಾಗಿ ಸಾಮಾಜಿಕ ಜಾಲತಾಣ ಕಂಪನಿಯು ಇತ್ತೀಚೆಗೆ ಭಾರಿ ಹಿನ್ನಡೆ ಅನುಭವಿಸಿತ್ತು. ಅದರ ಬೆನ್ನಿಗೇ ಮಾಹಿತಿ ಹಂಚಿಕೆಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

ಕೇಂಬ್ರಿಜ್‌ ಅನಲಿಟಿಕಾವು ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಕೊಟ್ಟದ್ದು ಬಹಳದ ದೊಡ್ಡ ತಪ್ಪು ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಅವರು ಏಪ್ರಿಲ್‌ನಲ್ಲಿ ಹೇಳಿದ್ದರು.

‘ಫೇಸ್‌ಬುಕ್‌ ಅಥವಾ ಸಂವಹನ ಸಾಧನ ತಯಾರಕರು ನಂಬಿಕಸ್ಥರು ಎಂದು ನೀವು ಭಾವಿಸಿರಬಹುದು. ಆದರೆ, ಹೆಚ್ಚು ಹೆಚ್ಚು ದತ್ತಾಂಶ ಸಂಗ್ರಹವಾದರೆ ಮತ್ತು ಸಂವಹನ ಸಾಧನದಲ್ಲಿರುವ ಆ್ಯಪ್‌ಗಳ ಮೂಲಕ ಅದನ್ನು ಪಡೆದುಕೊಳ್ಳಲು ಅವಕಾಶ ಇದ್ದರೆ ಅದು ಖಾಸಗಿ ಮಾಹಿತಿಗಳಿಗೆ ಗಂಭೀರ ಅಪಾಯವನ್ನು ಒಡ್ಡುತ್ತದೆ’ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕ ಸರ್ಗೆ ಎಗೆಲ್‌ಮನ್‌ ಹೇಳಿದ್ದಾರೆ.
*
ಒಪ್ಪಂದದ ಉದ್ದೇಶ ಏನಿತ್ತು
ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್‌ ಆ್ಯಪ್‌ಗಳು ಲಭ್ಯವಾಗುವ ಮೊದಲಿನ ದಿನಗಳಲ್ಲಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಿಂದಾಗಿ ಫೇಸ್‌ಬುಕ್‌ಗೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುವುದು, ನೆಲೆ ವಿಸ್ತರಿಸುವುದು ಸಾಧ್ಯವಾಗಿದೆ.
*

ಮಾಹಿತಿಗೆ ರಕ್ಷಣೆ ಇಲ್ಲ
ಫೇಸ್‌ಬುಕ್‌ ಕಂಪನಿಯು ಅಳವಡಿಸಿಕೊಂಡಿರುವ ಖಾಸಗಿ ಮಾಹಿತಿ ರಕ್ಷಣೆ ನೀತಿಯ ಬಗ್ಗೆಯೇ ಗಂಭೀರ ಪ್ರಶ್ನೆಗಳು ಎದ್ದಿವೆ. 2011ರ ಫೆಡರಲ್‌ ಟ್ರೇಡ್‌ ಕಮಿಷನ್‌ (ಎಫ್‌ಟಿಸಿ– ಅಮೆರಿಕದ ಗ್ರಾಹಕ ಹಕ್ಕುಗಳ ರಕ್ಷಣಾ ಆಯೋಗ) ಘೋಷಣೆಯನ್ನು ಕಂಪನಿಯು ಅನುಸರಿಸುತ್ತಿದೆಯೇ ಎಂಬ ಬಗ್ಗೆ ಅನುಮಾನ ಮೂಡಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಹೇಳಿದೆ.

ಫೇಸ್‌ಬುಕ್‌ ಖಾತೆದಾರರ ಗೆಳೆಯರ ಮಾಹಿತಿಯನ್ನು ಅವರ ಒಪ್ಪಿಗೆ ಪಡೆದುಕೊಳ್ಳದೆಯೇ ಇತರ ಕಂಪನಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಬಳಕೆದಾರರ ಮಾಹಿತಿಯನ್ನು ಬೇರೆಯವರ ಜತೆಗೆ ಹಂಚಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ ನಂತರವೂ ಇದು ನಡೆದಿದೆ.

ಮಾಹಿತಿಯನ್ನು ಬೇರೆಯವರಿಗೆ ನೀಡುವುದನ್ನು ನಿರಾಕರಿಸಿದವರ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ. ತಮ್ಮ ಮಾಹಿತಿ ಸುರಕ್ಷಿತ ಎಂದು ಖಾತೆದಾರರು ಭಾವಿಸಿಕೊಂಡಿರುತ್ತಾರೆ. ಆದರೆ ವಾಸ್ತವದಲ್ಲಿ ಹಾಗೆ ಇಲ್ಲ ಎಂದು ವರದಿ ಹೇಳಿದೆ.
*
ಮಾಹಿತಿ ಹಂಚಿಕೆ ಸರಿ: ಫೇಸ್‌ಬುಕ್‌ ಸಮರ್ಥನೆ
ವಿವಿಧ ಕಂಪನಿಗಳ ಜತೆಗೆ ದತ್ತಾಂಶ ಹಂಚಿಕೆ ಒಪ್ಪಂದ ಮಾಡಿಕೊಂಡಿರುವುದನ್ನು ಫೇಸ್‌ಬುಕ್‌ ಕಂಪನಿಯು ಸಮರ್ಥಿಸಿಕೊಂಡಿದೆ. ಖಾಸಗಿತನ ನೀತಿ ಮತ್ತು ಎಫ್‌ಟಿಸಿ ಒಪ್ಪಂದವನ್ನು ಉಲ್ಲಂಘಿಸಿಲ್ಲ ಎಂದು ಫೇಸ್‌ಬುಕ್‌ ಹೇಳಿದೆ. 

ಫೇಸ್‌ಬುಕ್‌ನ ವಿವಿಧ ಆವೃತ್ತಿಗಳನ್ನು ಬಳಕೆದಾರರಿಗೆ ನೀಡುವುದಕ್ಕಾಗಿ ಮಾತ್ರ ಸಂವಹನ ಸಾಧನಗಳ ತಯಾರಕರು ಮಾಹಿತಿ ಬಳಸಿಕೊಳ್ಳುತ್ತಾರೆ ಎಂದು ಫೇಸ್‌ಬುಕ್‌ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
*
ಆ್ಯಪ್‌ ಅಭಿವೃದ್ಧಿಪಡಿಸುವವರು ನಮ್ಮ ದತ್ತಾಂಶವನ್ನು ಬಹಳ ಭಿನ್ನ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ, ಹಾಗಾಗಿ ಈ ಪಾಲುದಾರಿಕೆ ಬಹಳ ವಿಶಿಷ್ಟವಾಗಿದೆ.
– ಅಯಾಮಿ ಆರ್ಚಿಬಾಂಗ್, ಫೇಸ್‌ಬುಕ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.