ADVERTISEMENT

ಬಂದೂಕು ತೋರಿಸಿ ರಾಜೀನಾಮೆ ಪಡೆದರು: ನಶೀದ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 12:10 IST
Last Updated 8 ಫೆಬ್ರುವರಿ 2012, 12:10 IST

ಮಾಲೆ (ರಾಯಿಟರ್ಸ್/ ಎಪಿ): ~ಬಂದೂಕು ಹಿಡಿದು ನನ್ನನ್ನು ಬಲಾತ್ಕಾರವಾಗಿ ಅಧಿಕಾರದಿಂದ ಕೆಳಗಿಳಿಸಲಾಯಿತು~ ಎಂದು ಬುಧವಾರ ಇಲ್ಲಿ ಬಹಿರಂಗ ಪಡಿಸಿದ ಮಾಲ್ದೀವ್ಸ್ ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್, ತತ್ ಕ್ಷಣ ರಾಜೀನಾಮೆ ನೀಡುವಂತೆ ತಮ್ಮ ಉತ್ತರಾಧಿಕಾರಿ ಮೊಹಮ್ಮದ್ ವಹೀದ್ ಮನಿಕ್ ಅವರನ್ನು ಆಗ್ರಹಿಸಿದರು.

ಪದತ್ಯಾಗ ಮಾಡಿದ ಒಂದು ದಿನದ ಬಳಿಕ ಪಕ್ಷ ಸದಸ್ಯರ ಸಭೆಯಲ್ಲಿ ಪಾಲ್ಗೊಂಡ ಅವರು ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ  ~ಹೌದು. ನನ್ನನ್ನು ಬಂದೂಕಿನ ನಳಿಕೆ ಎದುರು ರಾಜೀನಾಮೆ ನೀಡುವಂತೆ ಬಲಾತ್ಕರಿಸಲಾಯಿತು~ ಎಂದು ಹೇಳಿದರು.

~ನನ್ನ ಸುತ್ತಲೂ ಬಂದೂಕುಗಳನ್ನು ಹಿಡಿಯಲಾಗಿತ್ತು. ರಾಜೀನಾಮೆ ಕೊಡದೇ ಇದ್ದರೆ ಬಂದೂಕುಗಳನ್ನು ಬಳಸಲು ಹಿಂಜರಿಯುವುದಿಲ್ಲ~ ಎಂದು ಅವರು ಹೇಳಿದರು ಎಂದು ನಶೀದ್ ನುಡಿದರು.

~ಈ ವಿಷಯದ ಬಗ್ಗೆ ಗಮನಹರಿಸಬೇಕು ಮತ್ತು ಈ ಕ್ಷಿಪ್ರದಂಗೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂಬುದಾಗಿ ಮುಖ್ಯ ನ್ಯಾಯಮೂರ್ತಿಯವರನ್ನು ನಾನು ಆಗ್ರಹಿಸುತ್ತೇನೆ. ಕಾನೂನುಬದ್ಧ ಸರ್ಕಾರದ ಮರುಸ್ಥಾಪನೆಗಾಗಿ ನಾವು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತೇವೆ~ ಎಂದು ನಶೀದ್ ನುಡಿದರು.

ವಿಶ್ವದ ಶ್ರೀಮಂತ ಪ್ರವಾಸಿಗರ ಖ್ಯಾತ ಪ್ರವಾಸಿ ತಾಣವಾಗಿರುವ ಮಾಲ್ದೀವ್ಸ್ ನಲ್ಲಿ ಮಂಗಳವಾರ ನಡೆದ ಕ್ಷಿಪ್ರಕ್ರಾಂತಿ ಬಳಿಕ ಮೊಹಮ್ಮದ್ ವಹೀದ್ ಹಸನ್ ಮನಿಕ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

ನಶೀದ್ ಅವರತ್ತ ಬಂದೂಕುಗಳನ್ನು ಹಿಡಿದಿದ್ದವರು ಯಾರು ಎಂಬುದು ಸ್ಪಷ್ಟವಾಗಿಲ್ಲ.

ಇದಕ್ಕೆ ಮುನ್ನ ನಡೆದ ಪಕ್ಷ ಕಾರ್ಯಕರ್ತರ ಸಭೆಯಲ್ಲಿ ನಶೀದ್ ಅವರಿಗೆ ಸದಸ್ಯರಿಂದ ವ್ಯಾಪಕ ಬೆಂಬಲ ವ್ಯಕ್ತಗೊಂಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.