ADVERTISEMENT

ಬಡತನ ನಿರ್ಮೂಲನೆಯಿಂದ ಉತ್ತಮ ಜಗತ್ತು ನಿರ್ಮಾಣ ಸಾಧ್ಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2011, 19:30 IST
Last Updated 24 ಏಪ್ರಿಲ್ 2011, 19:30 IST

ಷಿಕಾಗೊ(ಪಿಟಿಐ): ಉತ್ತಮ ಜಗತ್ತು ನಿರ್ಮಿಸಲು ಬಡತನ ನಿರ್ಮೂಲನೆಯಾಗಬೇಕು ಎಂದು ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಹೇಳಿದರು.

ಇಲ್ಲಿನ ಇಂಡೋ-ಅಮೆರಿಕನ್ ಕೇಂದ್ರ (ಐಎಸಿ)ದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಉತ್ತಮ ಸಮಾಜ ನಿರ್ಮಾಣಕ್ಕೆ ಬಡತನ ನಿವಾರಣೆ ಜತೆಗೆ ಶುದ್ಧ ಕುಡಿಯುವ ನೀರು ಪೂರೈಕೆ, ಗುಣಮಟ್ಟದ ಶಿಕ್ಷಣದ ಅಗತ್ಯವೂ ಇದೆ. ಅಲ್ಲದೇ ಪ್ರತಿಯೊಬ್ಬರು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು  ಅವರು ಅಭಿಪ್ರಾಯಪಟ್ಟರು.

ನಾಗರಿಕರ ವಿಚಾರಧಾರೆಗಳು, ಆರ್ಥಿಕತೆ ಮತ್ತು ಉತ್ತಮ ಪರಿಸರದಿಂದ ಜಗತ್ತನ್ನು ಒಂದುಗೂಡಿಸಬಹುದು ಎಂದು ಅವರು ನುಡಿದರು.

ಮೌಲ್ಯಯುತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದ್ದು, ಹೊಸ ಯೋಚನೆಗಳೆಲ್ಲ ರಾಜಕೀಯದಿಂದ ಹೊರತಾಗಿರಬೇಕು ಎಂದು ಅವರು ಹೇಳಿದರು.

ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ರಾಜಕೀಯ ಅರಾಜಕತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಈಜಿಪ್ಟ್‌ನಲ್ಲಿ ನಡೆದ ಕ್ರಾಂತಿಯ ಬಿರುಗಾಳಿ ಅರಬ್ ಜಗತ್ತಿನಲ್ಲೆಡೆ ಹರಡಿದೆ ಎಂದರು.

‘ನಾವೆಲ್ಲರೂ ಸೇರಿ ಭ್ರಷ್ಟಾಚಾರವನ್ನು ತಡೆಗಟ್ಟಬೇಕಾಗಿದೆ. ಪರಮಾಣು ಶಕ್ತಿ ದೋಷರಹಿತವಾಗಿದ್ದು, ಜಗತ್ತಿನಾದ್ಯಂತ ಇದನ್ನು ಮುಕ್ತವಾಗಿ ಬಳಸಬಹುದು’ ಎಂದು ಕಲಾಂ ನುಡಿದರು.

ಭಾರತದಲ್ಲಿ ಮಹಿಳೆಯರ ಸಬಲೀಕರಣ ಆಗಬೇಕಾದರೆ ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 30ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಅವರು ಒತ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.