ADVERTISEMENT

ಬಣ್ಣದ ಹಕ್ಕಿಯೇ ವಿಕಾಸದಲ್ಲಿ ಮುಂದು...

​ಪ್ರಜಾವಾಣಿ ವಾರ್ತೆ
Published 10 ಮೇ 2012, 19:30 IST
Last Updated 10 ಮೇ 2012, 19:30 IST
ಬಣ್ಣದ ಹಕ್ಕಿಯೇ ವಿಕಾಸದಲ್ಲಿ ಮುಂದು...
ಬಣ್ಣದ ಹಕ್ಕಿಯೇ ವಿಕಾಸದಲ್ಲಿ ಮುಂದು...   

ಸಿಡ್ನಿ (ಎಎಫ್‌ಪಿ): ವಿವಿಧ ಬಣ್ಣಗಳ ಚಿತ್ತಾರ ಹೊಂದಿರುವ ಪಕ್ಷಿಗಳು ಸಾಮಾನ್ಯ ಪಕ್ಷಿಗಳಿಗಿಂತ ವೇಗವಾಗಿ ಹೊಸ ಪ್ರಭೇದವಾಗಿ ವಿಕಸನ ಹೊಂದುತ್ತವೆ ಎಂದು ಆಸ್ಟ್ರೇಲಿಯಾ ಸಂಶೋಧಕರು ನಡೆಸಿದ ಅನುವಂಶಿಕ ಅಧ್ಯಯನದಿಂದ ಬಹಿರಂಗಗೊಂಡಿದೆ.

ತಲೆಯಲ್ಲಿ ಕೆಂಪು, ಕಪ್ಪು, ಹಳದಿ ಬಣ್ಣ ಹೊಂದಿರುವ ಗೌಲ್ಡಿಯನ್ ಫಿಂಚ್ ಜಾತಿಯ ಹಕ್ಕಿಗಳು ವಿವಿಧ ಪ್ರಭೇದಗಳಾಗಿ ಶೀಘ್ರ ವಿಕಸನ ಹೊಂದಿರುವುದು ಅಧ್ಯಯನದಿಂದ ಖಚಿತಪಟ್ಟಿದೆ ಎಂದು ಮೆಲ್ಬರ್ನ್ ವಿಶ್ವವಿದ್ಯಾಲಯ ಸಂಶೋಧಕರು ವಿವರಿಸಿದ್ದಾರೆ.

60 ವರ್ಷಗಳ ಹಿಂದೆ ಪ್ರತಿಪಾದಿತವಾದ ಜೀವ ವಿಕಾಸ ವಾದವನ್ನು ಇದು ಪುಷ್ಟೀಕರಿಸಿದ್ದು, ಜೀವ ವೈವಿಧ್ಯ ಸೃಷ್ಟಿ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯದ ಮೇಲೆ ಕೂಡ ಬೆಳಕು ಚೆಲ್ಲುತ್ತದೆ ಎಂದು ಪ್ರಮುಖ ಸಂಶೋಧಕಿ ಡೆವಿ ಸ್ಟೋರ್ಟ್-ಫಾಕ್ಸ್ ಹೇಳಿದ್ದಾರೆ.

ಬಣ್ಣದ ಜೀವಿಗಳು ಹೊಸ ಪ್ರಭೇದಗಳಾಗಿ ವಿಕಸನ ಹೊಂದುವುದು ಬರೀ ಹಕ್ಕಿ ವರ್ಗಕ್ಕೆ ಮಾತ್ರ ಸೀಮಿತವಲ್ಲ. ಹಲ್ಲಿ, ಚಿಟ್ಟೆ, ಮೀನು, ಬಸವನಹುಳು ಇತ್ಯಾದಿಗಳಲ್ಲಿಯೂ ಕಂಡುಬಂದಿದೆ ಎಂದೂ ಅವರು ತಿಳಿಸಿದ್ದಾರೆ.

ಕೆಲವು ಜೀವಿಗಳು ಹೊಸ ಪ್ರಭೇದಗಳಾಗಿ ವಿಕಸನ ಹೊಂದಿದರೆ ಇನ್ನು ಕೆಲವು ಜೀವಿಗಳು ಕೋಟ್ಯಂತರ ವರ್ಷಗಳ ಅವಧಿವರೆಗೆ ಒಂದೇ ರೀತಿ ಇರುವುದಕ್ಕೆ ಕಾರಣ ಏನು ಎಂಬುದನ್ನು ಮೂಲವಾಗಿಟ್ಟುಕೊಂಡು ಅಧ್ಯಯನ ನಡೆಸಿದ್ದಾಗಿ ಫಾಕ್ಸ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.