ADVERTISEMENT

ಬರ್ಕಿನಾ ಫಾಸೊ: ಮೂವರು ಉಗ್ರರ ಸಹಿತ 25 ಸಾವು

ಬರ್ಕಿನಾಬೆ, ಕಫ್ಟಿನೊನಲ್ಲಿನ ಕಾರ್ಯಾಚರಣೆ ಅಂತ್ಯ; ವೈಬಿ ಹೋಟೆಲ್‌ನಲ್ಲಿ ಮುಂದುವರೆದ ಕಾಳಗ

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 12:19 IST
Last Updated 16 ಜನವರಿ 2016, 12:19 IST
ಒತ್ತೆಯಾಳುಗಳನ್ನು ರಕ್ಷಿಸಿ ಸೇನಾ ವಾಹನದಲ್ಲಿ ಸುರಕ್ಷಿತ ಸ್ಥಳಕ್ಕೆ ತಂದ ನೋಟ -ರಾಯಿಟರ್ಸ್ ಚಿತ್ರ
ಒತ್ತೆಯಾಳುಗಳನ್ನು ರಕ್ಷಿಸಿ ಸೇನಾ ವಾಹನದಲ್ಲಿ ಸುರಕ್ಷಿತ ಸ್ಥಳಕ್ಕೆ ತಂದ ನೋಟ -ರಾಯಿಟರ್ಸ್ ಚಿತ್ರ   

ವಾಗೆಡುಗು, ಬರ್ಕಿನಾ ಫಾಸೊ(ಎಎಫ್‌ಪಿ): ಪಶ್ಚಿಮ ಆಫ್ರಿಕಾದ ರಾಷ್ಟ್ರ ಬರ್ಕಿನಾಫಾಸೊದಲ್ಲಿ ಉಗ್ರರು ಶನಿವಾರ ಅಟ್ಟಹಾಸ ಮೆರೆದಿದ್ದಾರೆ. ರಾಜಧಾನಿ ನಗರ ವಾಗೆಡುಗುದಲ್ಲಿರುವ ಭವ್ಯ ಹೋಟೆಲ್‌ ಮತ್ತು ರೆಸ್ಟೋರೆಂಟ್‌ವೊಂದರಲ್ಲಿ ಅಲ್‌ಕೈದಾ ಉಗ್ರರು ಗುಂಡಿನ ಮಳೆಗರೆದಿದ್ದು, 22 ಜನರನ್ನು ಬಲಿಪಡೆದಿದ್ದಾರೆ.

ಶನಿವಾರ ನಸುಕಿನಲ್ಲಿ ಈ ಘಟನೆ ನಡೆದಿದೆ. ಭದ್ರತಾ ಪಡೆಗಳ ಕಾರ್ಯಾಚರಣೆ ನಡೆಸಿ ಮೂವರು ಉಗ್ರರನ್ನು ಕೊಂದಿದ್ದು, ಭಯೋತ್ಪಾದಕರು ಒತ್ತೆಯಾಗಿರಿಸಿಕೊಂಡಿದ್ದ 126 ಜನರನ್ನು ರಕ್ಷಿಸಿದ್ದಾರೆ.

ಈ ಬೆನ್ನಲ್ಲೆ ಬರ್ಕಿನಾಬೆ ಸಮೀಪದ ಮತ್ತೊಂದು ಹೋಟೆಲ್‌ನಲ್ಲಿ ಭಯೋತ್ಪಾದಕರು ದಾಳಿ ಮಾಡಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ADVERTISEMENT

‘ಭವ್ಯ ಬರ್ಕಿನಾಬೆ ಹೋಟೆಲ್ ಹಾಗೂ ‘ಕಫ್ಟಿನೊ’ ರೆಸ್ಟೋರೆಂಟ್‌ನಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಗಿದಿದೆ. ಆದರೆ, ‘ಕಫ್ಟಿನೊ’ ಸಮೀಪದ ವೈಬಿ ಹೋಟೆಲ್‌ನಲ್ಲಿ ಭಯೋತ್ಪಾದಕರ ವಿರುದ್ಧದ ಕಾಳಗ ಮುಂದುವರೆದಿದೆ’ ಎಂದು ಬರ್ಕಿನಾಫಾಸೊ ಆಂತರಿಕ ಸಚಿವರಾದ ಸಿಮನ್‌ ಕಂಪಾವೊರೆ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

147 ಕೊಠಡಿಗಳುಳ್ಳ ಬರ್ಕಿನಾಬೆ ಹೋಟೆಲ್‌ ಹಾಗೂ ಕಫ್ಟಿನೊ ರೆಸ್ಟೋರೆಂಟ್‌ಗೆ ಹೆಚ್ಚಾಗಿ ವಿಶ್ವಸಂಸ್ಥೆಯ ಸಿಬ್ಬಂದಿ ಹಾಗೂ ವಿದೇಶಿಗರು ಭೇಟಿ ನೀಡುತ್ತಾರೆ.

ಅಲ್ಲದೇ, ‘ಕಾರ್ಯಾಚರಣೆಯಲ್ಲಿ ರಕ್ಷಿಸಲಾದ 126 ಮಂದಿ ಪೈಕಿ 33 ಜನರು ಗಾಯಗೊಂಡಿದ್ದಾರೆ. ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಮೃತ ಉಗ್ರರಲ್ಲಿ ಒಬ್ಬ ಅರಬ್‌ ಪ್ರಜೆಯಾಗಿದ್ದು, ಇನ್ನುಳಿದಿಬ್ಬರು ಆಫ್ರಿಕಾದ ಕಪ್ಪುವರ್ಣೀಯರು’ ಎಂದೂ ಅವರು ಹೇಳಿದ್ದಾರೆ.

22 ಜನರು ಸಾವನ್ನಪ್ಪಿರುವುದು ಖಚಿತಗೊಂಡಿದೆ. ಆದರೆ ಗುಂಡಿನ ಕಾಳಗ ಪ್ರಗತಿಯಲ್ಲಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಫ್ರಾನ್ಸ್‌ನ ವಿಶೇಷ ಭದ್ರತಾ ಪಡೆಗಳ ಬೆಂಬಲದೊಂದಿಗೆ ಬರ್ಕಿನಾಬೊ ಭದ್ರತಾ ಸಿಬ್ಬಂದಿಯು ಉಗ್ರರ ವಿರುದ್ಧದ ಕಾರ್ಯಾಚರಣೆ ನಡೆಸುತ್ತಿದೆ.

ಭಯಾನಕ ದೃಶ್ಯ: ‘ಅದೊಂದು ಭಯಾನಕ ದೃಶ್ಯ. ಜನರು ಮಲಗಿದ್ದರು. ರಕ್ತದ ಹೊಳೆಯೇ ಹರಿಯುತ್ತಿತ್ತು. ಅತ್ಯಂತ ಹತ್ತಿರದಿಂದಲೇ ಅವರು ಗುಂಡು ಹಾರಿಸುತ್ತಿದ್ದರು’ ಎನ್ನುತ್ತಾರೆ ದಾಳಿಯಿಂದ ಪಾರಾದ ಯನ್ನಿಕ್‌ ಸವಾದೊಗೊ.

‘ಅವರು ಪರಸ್ಪರ ಮಾತನಾಡುತ್ತ, ಜನರ ಸುತ್ತಲೂ ತಿರುಗಾಡುತ್ತಿದ್ದರು. ಗಾಯಗೊಂಡವರನ್ನು, ಕೋಣೆಗಳಿಂದ ಹೊರಗೆ ಬಂದವರತ್ತ ಗುಂಡಿನ ಮಳೆಗೈದು ಸಾಯಿಸುತ್ತಿದ್ದರು’ ಎಂದು ಅವರು ವಿವರಿಸಿದ್ದಾರೆ.

ದಾಳಿ ಹೊಣೆಹೊತ್ತ ಎಕ್ಯುಐಎಂ?: ದಾಳಿ ಘಟನೆಯ ಹೊಣೆಯನ್ನು ಅಲ್‌ಕೈದಾ‌ ಇಸ್ಲಾಮಿಕ್ ಮಗ್ರೀಬ್‌ (ಎಕ್ಯುಐಎಂ) ಉಗ್ರ ಸಂಘಟನೆ ಹೊತ್ತುಕೊಂಡಿರುವುದಾಗಿ ಅಮೆರಿಕ ಮೂಲದ ಸರ್ಕಾರೇತರ ಭಯೋತ್ಪಾದನಾ ವಿರೋಧಿ ಸಂಘಟನೆ ಎಸ್‌ಐಟಿಇ ಇಂಟಲಿಜೆನ್ಸ್‌ ಗ್ರುಪ್‌ ಹೇಳಿದೆ.

‘ಫ್ರಾನ್ಸ್‌ ವಿರುದ್ಧದ ಪ್ರತಿಕಾರ’ವೇ ದಾಳಿಗೆ ಕಾರಣ ಎಂದು ಎಕ್ಯುಐಎಂ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.